ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ತಡೆಗಟ್ಟಿ : ಶೀಘ್ರವೇ ಖಾಯಂ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಆಗ್ರಹ

ಸಪ್ತಸಾಗರ ವಾರ್ತೆ ವಿಜಯಪುರ, ಫೆ. 27 :
ಕರ್ನಾಟಕದ ಎಲ್ಲಾ ವರ್ಗದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಇಂದು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಶೀಘ್ರವೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನಾಡಿನ ಯುವಜನರಿಗೆ ಖಾಯಂ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಕುರಿತು ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಈಗಾಗಲೇ ದಲಿತ ವಿದ್ಯಾರ್ಥಿ ಪರಿಷತ್ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಹಲವು ಹೋರಾಟದ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದೆ. ರಾಜ್ಯದಲ್ಲಿ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾಗುತ್ತಿರುವುದರಿಂದ ಲಕ್ಷಾಂತರ ಯುವಕರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಅತೀ ಹೆಚ್ಚು ವಿದ್ಯಾಭ್ಯಾಸ ಮಾಡಿಯೂ ಉದ್ಯೋಗವಿಲ್ಲದೆ, ಮನೆಯವರ ನಿರೀಕ್ಷೆಗಳನ್ನು ಪೂರೈಸಲಾಗದೆ ರಾಜ್ಯದ ಹಲವು ಭಾಗಗಳಲ್ಲಿ ನಿರುದ್ಯೋಗಿ ಯುವಕರು ಆತ್ಮಹತ್ಯೆಯಂತಹ ಅತೀ ದಾರುಣ ಹಾದಿ ಹಿಡಿಯುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಯುವಶಕ್ತಿಯನ್ನು ಈ ಹತಾಶೆಯಿಂದ ಹೊರತರುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರವು ಬಹುತೇಕ ಇಲಾಖೆಗಳಲ್ಲಿ ಖಾಯಂ ಹುದ್ದೆಗಳನ್ನು ಭರ್ತಿ ಮಾಡುವ ಬದಲಿಗೆ ‘ಒಳ ಗುತ್ತಿಗೆ’ ಅಥವಾ ‘ಹೊರಗುತ್ತಿಗೆ’ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಇದರಿಂದ ಯುವಕರಿಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ ಮತ್ತು ಇದು ಯುವಜನರ ಬದುಕಿನ ಜೊತೆ ಆಟವಾಡಿದಂತಾಗಿದೆ. ದಯವಿಟ್ಟು ಈ ಪದ್ಧತಿಯನ್ನು ಕೈಬಿಟ್ಟು, ಸಂವಿಧಾನಬದ್ಧವಾಗಿ ನೇರ ಮತ್ತು ಖಾಯಂ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಕೋವಿಡ್ ಕಾರಣದಿಂದ ಮತ್ತು ಒಳಮೀಸಲಾತಿ ಜಾರಿಯಿಂದಾಗಿ ಪರೀಕ್ಷೆಗಳು ಸರಿಯಾದ ಸಮಯಕ್ಕೆ ನಡೆಯದ ಕಾರಣ ಲಕ್ಷಾಂತರ ಅಭ್ಯರ್ಥಿಗಳು ವಯೋಮಿತಿ ಮೀರಿದ್ದಾರೆ. ಇವರಿಗೆ ನ್ಯಾಯ ಒದಗಿಸಲು ಕನಿಷ್ಠ 5 ವರ್ಷಗಳ ವಯೋಮಿತಿ ಸಡಿಲಿಕೆ ಅತೀ ಅಗತ್ಯವಾಗಿದೆ. ಈ ಬಗ್ಗೆ ನಿಮ್ಮ ಸರ್ಕಾರ ವಯೋಮಿತಿ ಸಡಿಲಗೊಳಿಸಿರುವದು ಸಕಾರಾತ್ಮಕ ಸ್ಪಂದನೆ ನೀಡಿದೆ. ಆದರೆ ಬಹು ದಿನಗಳ ದಲಿತ ಸಮುದಾಯದ ಒಳಮೀಸಲಾತಿ ಜಾರಿಗೆ ಸರ್ಕಾರದ ವಿಳಂಬ ನೀತಿ ಅನುಸರಿಸುತ್ತಿರುವದು ನಿರಾಶೆ ಮೂಡಿಸಿದೆ. ಕೂಡಲೇ ಪೂರ್ಣ ಪ್ರಮಾಣದಲ್ಲಿ ಒಳಮೀಸಲಾತಿ ಜಾರಿ ಮಾಡಿ ಅದರಂತೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕು.
ಉದ್ಯೋಗ ಮೇಳ ಹೆಸರಿನಲ್ಲಿ ಈ ನಾಡಿನ ಯುವ ಶಕ್ತಿಯನ್ನು ಖಾಸಗಿ ಕಂಪನಿಗಳಿಗೆ ನೀಡುವ ಬದಲು ಸರ್ಕಾರದಿಂದ ನೇಮಕಾತಿ ಪ್ರಕ್ರಿಯೆ ನಡೆಯಲಿ. ನಾಡಿನ ಯುವ ಶಕ್ತಿ ಈ ನಾಡನ್ನು ಕಟ್ಟಲು ಸದ್ಬಳಕೆ ಆಗಲಿ ಎಂಬದು ನಮ್ಮೆಲ್ಲರ ಆಶಯವಾಗಿದೆ. ಖಾಲಿ ಇರುವ 2.8 ಲಕ್ಷಕ್ಕೂ ಅಧಿಕ ಹುದ್ದೆಗಳಿಗೆ ಹಂತ-ಹಂತವಾಗಿ ಶೀಘ್ರವೇ ಅಧಿಸೂಚನೆ ಹೊರಡಿಸಿ, ಅಭ್ಯರ್ಥಿಗಳಲ್ಲಿ ಭರವಸೆ ಮೂಡಿಸಬೇಕು ಎಂದರು.
ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ಯುವಕರು ಇನ್ನು ಮುಂದೆ ಸಾವಿಗೆ ಶರಣಾಗದಂತೆ ತಡೆಯಲು ಮತ್ತು ಅವರಿಗೆ ಗೌರವಯುತ ಬದುಕು ನೀಡಲು ಸರ್ಕಾರ ತಕ್ಷಣವೇ ಸ್ಪಂದಿಸಬೇಕು. ಈ ವಿಚಾರದಲ್ಲಿ ತಾವು ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ನಿರುದ್ಯೋಗಿ ಯುವಜನರು ಮತ್ತು ವಿದ್ಯಾರ್ಥಿಗಳಿಗೆ ಸಂಘಟಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬಾಲಾಜಿ ಕಾಂಬಳೆ ಹೇಳಿದರು.
ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ನ ಜಿಲ್ಲಾ ಸಹ ಸಂಚಾಲಕ ಮಹಾದೇವ ಚಲವಾದಿ, ದಾವೂದ್ ನಾಯ್ಕೋಡಿ, ಹುಚ್ಚಪ್ಪ ಭಾವಿಮನಿ, ಸಿದ್ದು ಸಿಂಗೆ, ಮಹೇಶ ಕೊಳ್ಳಿ, ವಿನೋದ್, ಸಂದೇಶ, ಮಂಜು ಬಿಸನಾಳ, ವಿರೇಶ, ದಾನೇಶ್, ಮಂಜುನಾಥ್, ಪ್ರಕಾಶ ಅಲ್ಲದೇ ಇನ್ನಿತರರು ಉಪಸ್ಥಿತರಿದ್ದರು.

Share this