ಬರದ ಮುನ್ಸೂಚನೆ ಬೆನ್ನಲ್ಲೇ ನಗರಾಭಿವೃದ್ಧಿ ಸಚಿವರ ಖಡಕ್ ಸೂಚನೆ
ಮೂರನೇ ಹಂತದ ನೀರಿನ ಯೋಜನೆಗೆ ವೇಗ: ಎಂ.ಬಿ. ಪಾಟೀಲ
ಸಪ್ತಸಾಗರ ವಾರ್ತೆ,ವಿಜಯಪುರ, ಆ.9: ಮುಂಗಾರು ಮಳೆ ಕೊರತೆಯ ಹಿನ್ನೆಲೆಯಲ್ಲಿ ಸಂಭವನೀಯ ಬರ ಪರಿಸ್ಥಿತಿಯನ್ನು ಎದುರಿಸಲು ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಮುಂಜಾಗ್ರತಾ ಸಂಗ್ರಹಕ್ಕೆ ಒತ್ತು ನೀಡುವುದರ ಜತೆಗೆ, ನಿತ್ಯ ನೀರು ಪೂರೈಕೆ, ಸ್ವಚ್ಛತೆ ಹಾಗೂ ತೆರಿಗೆ ವಸೂಲಾತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಭಾನುವಾರ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರಕ್ಕೆ ಪೂರೈಕೆಯಾಗುವ ಕುಡಿಯುವ ನೀರು ಸ್ವಚ್ಛ ಹಾಗೂ ಗುಣಮಟ್ಟದಿಂದ ಕೂಡಿರಬೇಕು. ಜನರು ಮತ್ತು ಜಾನುವಾರುಗಳಿಗೆ ನೀರಿನ ಕೊರತೆ ಎದುರಾಗದಂತೆ ಈಗಿನಿಂದಲೇ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ನಗರಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳುವ ಯೋಜನೆ ರೂಪಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಮನೆ-ಮನೆಗೆ ನೀರಿನ ಮೀಟರ್
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ ಬಳಿಕ ಕ್ರಮ ಕೈಗೊಳ್ಳುವ ಬದಲು ಮುಂಚಿತವಾಗಿಯೇ ಯೋಜನೆ ರೂಪಿಸಬೇಕು. ನಿಯಮಿತ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವುದರ ಜತೆಗೆ ಮೂರನೇ ಹಂತದ ಕುಡಿಯುವ ನೀರಿನ ಯೋಜನೆಗೆ ತಕ್ಷಣ ಪ್ರಸ್ತಾವನೆ ಸಲ್ಲಿಸಬೇಕು. ಪ್ರತಿ ಮನೆಗೂ ನೀರಿನ ಮೀಟರ್ ಅಳವಡಿಸಬೇಕು ಎಂದು ಸೂಚಿಸಿದರು.
ಕಸ ವಿಂಗಡಣೆಗೆ ಕಟ್ಟುನಿಟ್ಟು
ನಗರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿ ಮನೆಯಿಂದಲೇ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸಂಗ್ರಹಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಂಗ್ರಹಿಸಲಾದ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಅಗತ್ಯ ಯಂತ್ರೋಪಕರಣಗಳನ್ನು ಖರೀದಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಮಳೆಗಾಲದಲ್ಲಿ ನಗರದಲ್ಲಿ ಪ್ರವಾಹ ಉಂಟಾಗದಂತೆ ಚರಂಡಿ ವ್ಯವಸ್ಥೆ ಸಮರ್ಪಕಗೊಳಿಸಬೇಕು. ರಸ್ತೆಗಳು ಹಾಳಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ರಸ್ತೆ, ಚರಂಡಿ ಹಾಗೂ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳ ಬಗ್ಗೆ ವಿಶೇಷ ನಿಗಾ ವಹಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ತೆರಿಗೆ ಕಟ್ಟದವರಿಗೂ ನಿಗಾ
ಆಸ್ತಿ ತೆರಿಗೆ ವಸೂಲಾತಿಗೆ ಚುರುಕು ನೀಡುವಂತೆ ಸೂಚಿಸಿದ ಸಚಿವರು, ಆಸ್ತಿಗಳ ಕುರಿತು ಜಿಐಎಸ್ ಹಾಗೂ ಜಿಪಿಎಸ್ ಆಧಾರಿತ ಪ್ರತ್ಯೇಕ ದತ್ತಾಂಶ ಸಂಗ್ರಹಿಸಬೇಕು. ತೆರಿಗೆ ಪಾವತಿಸಿರುವವರ ಮಾಹಿತಿಯನ್ನು ಕ್ರಾಸ್‌ಚೆಕ್ ಮಾಡಿ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಬೇಕು ಎಂದರು.
2026-27ನೇ ಸಾಲಿನ ಆಸ್ತಿ ತೆರಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆ, ಉದ್ಯಮ ಪರವಾನಗಿ ಶುಲ್ಕ ಹಾಗೂ ನೀರಿನ ಬಳಕೆ ಶುಲ್ಕ ವಸೂಲಾತಿಯ ಪ್ರಗತಿಯನ್ನೂ ಸಚಿವರು ಪರಿಶೀಲಿಸಿದರು.
ಅಮೃತ್ ಕಾಮಗಾರಿಗೆ ವೇಗ
ಅಮೃತ್ ಯೋಜನೆ 1.0 ಮತ್ತು 2.0ರಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಕುರಿತು ಮಾಹಿತಿ ಪಡೆದ ಅವರು, ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇಂದಿರಾ ಕ್ಯಾಂಟೀನ್‌ಗಳ ಕಾರ್ಯನಿರ್ವಹಣೆ, ಸಾರ್ವಜನಿಕರಿಗೆ ನೀಡುತ್ತಿರುವ ಆಹಾರದ ಗುಣಮಟ್ಟ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ 2.0 ಹಾಗೂ ಎಸ್‌ಎಫ್‌ಸಿ ನಿಧಿಯಡಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ಸಚಿವರು ಪರಿಶೀಲನೆ ನಡೆಸಿದರು.
ಮೂರನೇ ಹಂತದ ನೀರಿನ ಯೋಜನೆಗೆ ಸರ್ಕಾರಕ್ಕೆ ಮನವಿ
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ವಿಜಯಪುರ ನಗರಕ್ಕೆ ಭವಿಷ್ಯದಲ್ಲಿ ನಿರಂತರ ಹಾಗೂ ಸಮರ್ಪಕ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಮೂರನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ನಗರದ ಜನತೆಗೆ ನಿರಂತರ ನೀರು ಪೂರೈಸಲು ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಮೇಯರ್ ಮಡಿವಾಳಪ್ಪ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಉಪ ಮೇಯರ್ ಸುಮಿತ್ರಾ ಜಾಧವ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ ಸೇರಿದಂತೆ ಪಾಲಿಕೆ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


