ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 21: ಸಮಾಜದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆ, ಸಾಮಾಜಿಕ ಅಸಮಾನತೆ, ಆರ್ಥಿಕ ಹಾಗೂ ಶೈಕ್ಷಣಿಕ ತಾರತಮ್ಯ ಮತ್ತು ಸಂಪತ್ತಿನ ಅಸಮಾನ ಹಂಚಿಕೆಯ ವಿರುದ್ಧ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತಿವೆ. ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವುದರ ಜೊತೆಗೆ, ಅವರನ್ನು ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಸಂಘಟನೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಶ್ರೀಶೈಲ ಚೆಲವಾದಿ ತಿಳಿಸಿದ್ದಾರೆ.
ಮಾಜಿ ಸಂಸದ ಪ್ರತಾಪಸಿಂಹ ಅವರು ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿ ನೀಲಿ ಶಾಲು ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಚೆಲುವಾದಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ದಲಿತ ಪರ ಸಂಘಟನೆಗಳು ಕೇವಲ ಹೋರಾಟಕ್ಕೆ ಸೀಮಿತವಾಗಿಲ್ಲ. ಜನಸಾಮಾನ್ಯರಿಗೆ ಸಂವಿಧಾನಬದ್ಧ ಹಕ್ಕುಗಳು, ಕರ್ತವ್ಯಗಳು ಹಾಗೂ ಸಾಮಾಜಿಕ ನ್ಯಾಯದ ಮಹತ್ವವನ್ನು ತಿಳಿಸುವ ಮೂಲಕ ಜಾಗೃತಿ ಮೂಡಿಸುತ್ತಿವೆ. ಸಂವಿಧಾನದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆಶಯಗಳನ್ನು ಜನರ ಬದುಕಿನಲ್ಲಿ ಸಾಕಾರಗೊಳಿಸುವ ಕಾರ್ಯದಲ್ಲಿ ತೊಡಗಿವೆ. ಈ ನಿಟ್ಟಿನಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಮನೋಭಾವಗಳಿಗೆ ದಲಿತ ಸಂಘಟನೆಗಳ ಹೋರಾಟ ಸವಾಲಾಗಿ ಪರಿಣಮಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಮಾಜದಲ್ಲಿ ಕೆಲವೇ ವರ್ಗದವರನ್ನು ಶ್ರೇಷ್ಠರೆಂದು ಬಿಂಬಿಸಿ, ಉಳಿದವರನ್ನು ಕೀಳಾಗಿ ಕಾಣುವ ಮನೋಭಾವ ಹಾಗೂ ವರ್ಣವ್ಯವಸ್ಥೆಯನ್ನು ಪೋಷಿಸುವ ಧೋರಣೆಗಳು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿವೆ. ಇಂತಹ ಅಸಮಾನತೆಯ ವ್ಯವಸ್ಥೆಯನ್ನು ಪ್ರಶ್ನಿಸಿ, ಪ್ರತಿಯೊಬ್ಬರಿಗೂ ಸಮಾನ ಗೌರವ, ಅವಕಾಶ ಮತ್ತು ಹಕ್ಕುಗಳು ದೊರೆಯುವ ಸಮಸಮಾಜ ನಿರ್ಮಾಣ ಮಾಡುವುದು ದಲಿತ ಪರ ಸಂಘಟನೆಗಳ ಮೂಲ ಆಶಯವಾಗಿದೆ ಎಂದು ತಿಳಿಸಿದ್ದಾರೆ.
ನೀಲಿ ಬಣ್ಣ ಹೋರಾಟದ ಸಂಕೇತ
ನೀಲಿ ಶಾಲು ಅಥವಾ ನೀಲಿ ಬಣ್ಣ ಕೇವಲ ಬಣ್ಣವಲ್ಲ; ಅದು ಅರಿವು, ಸ್ವಾಭಿಮಾನ, ಹೋರಾಟ ಮತ್ತು ಸಾಮಾಜಿಕ ಜಾಗೃತಿಯ ಸಂಕೇತವಾಗಿದೆ. ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪ್ರತಿನಿಧಿಸುವ ನೀಲಿ ಬಣ್ಣವು ಶೋಷಿತರಲ್ಲಿ ಆತ್ಮಗೌರವ ಮತ್ತು ಹಕ್ಕುಗಳ ಅರಿವು ಮೂಡಿಸುವ ಶಕ್ತಿಯಾಗಿದೆ. ಅಂಬೇಡ್ಕರ್ ಅವರ ಸಮಾನತೆಯ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸಿ, ಜಾತಿ ಅಸಮಾನತೆಯ ಗೋಡೆಗಳನ್ನು ಕೆಡವಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತಳಹದಿಯ ಮೇಲೆ ಸಮಸಮಾಜ ನಿರ್ಮಿಸುವ ದಿಸೆಯಲ್ಲಿ ದಲಿತ ಪರ ಸಂಘಟನೆಗಳು ತಮ್ಮ ಹೋರಾಟವನ್ನು ಮುಂದುವರಿಸಿವೆ ಎಂದು ಶ್ರೀಶೈಲ ಚೆಲವಾದಿ ತಿಳಿಸಿದ್ದಾರೆ.


