ಸಚಿವ ಸಂಪುಟದಲ್ಲಿ ಜೆ.ಟಿ. ಪಾಟೀಲರಿಗೆ ಸ್ಥಾನ ನೀಡಲು ದಲಿತ ಸಂಘರ್ಷ ಸಮಿತಿ ಆಗ್ರಹ

ಸಪ್ತಸಾಗರ ವಾರ್ತೆ,ಬಾಗಲಕೋಟೆ, ಜು.30:
ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬೀಳಗಿ ಕ್ಷೇತ್ರದ ನಾಲ್ಕು ಬಾರಿ ಶಾಸಕರಾಗಿರುವ ಹಿರಿಯ ರಾಜಕಾರಣಿ ಜೆ.ಟಿ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಸಮಿತಿಯ ರಾಜ್ಯ ಸಂಯೋಜಕ ಹಾಗೂ ರಾಜ್ಯ ಸಂಚಾಲಕ ಶ್ರೀಶೈಲ ಚಲವಾದಿ ನೇತೃತ್ವದಲ್ಲಿ ಪ್ರಕಟಣೆ ನೀಡಿರುವ ಪದಾಧಿಕಾರಿಗಳು, ಜೆ.ಟಿ. ಪಾಟೀಲ ಅವರು ಸರಳ-ಸಜ್ಜನಿಕೆಯ, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದು, ತಮ್ಮ ಶಾಸಕತ್ವದ ಅವಧಿಯಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಮನಿತ ವರ್ಗಗಳ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಘಟಪ್ರಭಾ ಸೇತುವೆ ನಿರ್ಮಾಣ ಹಾಗೂ ಸೊನ್ನ ಗ್ರಾಮದಿಂದ ಏತ ನೀರಾವರಿ ಯೋಜನೆಗೆ ಮಂಜೂರಾತಿ ದೊರಕಿಸಲು ಅವರು ವಿಶೇಷ ಶ್ರಮ ವಹಿಸಿದ್ದರು. ಅಲ್ಲದೆ, ಬೀಳಗಿ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಕಾಮಗಾರಿಗಳನ್ನು ಕೈಗೊಂಡಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಡಾ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯಗಳ ಮಂಜೂರಾತಿಯಲ್ಲಿಯೂ ಅವರು ಗಣನೀಯ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಜೆ.ಟಿ. ಪಾಟೀಲ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನ ನೀಡುವ ಮೂಲಕ ಅವರ ಅನುಭವವನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ.
ಈ ಆಗ್ರಹಕ್ಕೆ ರಾಜ್ಯ ಸಂಘಟನಾ ಸಂಚಾಲಕರಾದ ಹೆಚ್. ಮಹಾಂತೇಶ್, ಎನ್. ಶಂಕರ್, ಬಿ.ಎಚ್. ಸುರೇಶ್, ಬೆಂಗಳೂರು ವಿಭಾಗೀಯ ಸಂಚಾಲಕ ಭುವನೇಶ್, ಬೆಳಗಾವಿ ವಿಭಾಗೀಯ ಸಂಚಾಲಕ ಹೆಚ್.ಎನ್. ನೀಲನಾಯಕ, ಬಾಗಲಕೋಟೆ ಜಿಲ್ಲಾ ಸಂಚಾಲಕ ಬಿ.ಎಲ್. ಭಜಂತ್ರಿ ಸೇರಿದಂತೆ ಯಂಕಣ್ಣ ನಡುವಿನಮನಿ, ಆನಂದ ದೊಡಮನಿ, ದ್ಯಾಮಣ್ಣ ದೊಡಮನಿ ಹಾಗೂ ನಾಗೇಶ ಚಲವಾದಿ ಈ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Share this