ಸಪ್ತಸಾಗರ ವಾರ್ತೆ,ವಿಜಯಪುರ, ಆ. 21: ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ. ಡಿ.ಆರ್. ಸಾಗರ ಬಣ) ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಡಾ. ಆನಂದ್ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣ ಅವರು, ಅಸಮಾನತೆ ಹಾಗೂ ಅವಮಾನವನ್ನು ವಿರೋಧಿಸಿ ಜೀವನವಿಡೀ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಸಂವಿಧಾನದ ಮೂಲಕ ಸಾಕಾರಗೊಳಿಸಲಾಗಿದೆ. ಆದರೆ ಸಂವಿಧಾನ ಜಾರಿಯಾಗಿ 77 ವರ್ಷಗಳಾದರೂ ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದು ವಿಷಾದನೀಯ ಎಂದರು.
ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಆ.8ರಂದು ನಡೆದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ನಂತರ ಕೆಲವರು ಸ್ವಚ್ಛಗೊಳಿಸಿ ಹೋಮ-ಹವನ ನಡೆಸಿರುವುದು ಅತ್ಯಂತ ಖಂಡನೀಯ. ಜಾತಿಯ ಹಿನ್ನೆಲೆಯಲ್ಲಿ ಈ ರೀತಿಯ ಕೃತ್ಯ ಎಸಗುವ ಮೂಲಕ ರಾಷ್ಟ್ರೀಯ ನಾಯಕರಿಗೆ ಅವಮಾನ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
1927ರಲ್ಲಿ ಮಹಾಡ್ ಚೌದರ್ ಕೆರೆಯ ನೀರನ್ನು ದಲಿತರು ಕುಡಿದ ಸಂದರ್ಭದಲ್ಲಿ ಮೇಲ್ಜಾತಿಯವರು ಗೋಮೂತ್ರ ಹಾಗೂ ಸೆಗಣಿಯನ್ನು ಹಾಕಿ ನೀರನ್ನು ‘ಶುದ್ಧೀಕರಿಸಿದ’ ಘಟನೆ ಸೇರಿದಂತೆ ಅಸ್ಪೃಶ್ಯತೆಯ ವಿರುದ್ಧ ಡಾ. ಅಂಬೇಡ್ಕರ್ ನಡೆಸಿದ ಹೋರಾಟವನ್ನು ಸ್ಮರಿಸಿದ ಅವರು, ಇಂತಹ ಅಮಾನವೀಯ ಪದ್ಧತಿಗಳು ಮತ್ತೆ ತಲೆದೋರುವುದನ್ನು ತಡೆಯಬೇಕಾಗಿದೆ ಎಂದು ಹೇಳಿದರು.
ಜಾತಿ ಆಧಾರಿತ ಅಸ್ಪೃಶ್ಯತೆ ಆಚರಿಸುವವರ ವಿರುದ್ಧ ದೇಶದ್ರೋಹ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಸೂಕ್ತ ಕಾನೂನುಗಳಡಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಹಾಗೂ ಶೋಷಿತ ಸಮುದಾಯದಿಂದ ಬೆಳೆದು ರಾಷ್ಟ್ರೀಯ ನಾಯಕತ್ವಕ್ಕೆ ಏರಿದ ವ್ಯಕ್ತಿಯಾಗಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಯಾವುದೇ ಪ್ರಯತ್ನವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಹಿಸುವುದಿಲ್ಲ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಹಾಂತೇಶ ಸಾಸಬಾಳ, ರಾಜಕುಮಾರ ಕಳ್ಳಿಮನಿ, ದೇವೇಂದ್ರ ಬಾವಿಮನಿ, ಚಂದ್ರಶೇಖರ, ಸುರೇಶ ಶೇಗುಣಸಿ, ಪರಶುರಾಮ ಬೆಕಿನಾಳ, ಶಿವಕುಮಾರ ಗಣಿಹಾರ, ನಾಗೇಶ ರೆಡ್ಡಿ, ತಮಣ್ಣ, ಪರಸು ಇಂಗಳಗಿ, ದುಂಡಪ್ಪ ನಾಟಿಕಾರ, ಗಂಗಾಧರ ಬೇನೂರ, ವಿಜಯಕುಮಾರ ಕ್ಯಾತನ್, ಗೋಪಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವಮಾನ ಖಂಡಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ


