ಪಿಪಿಪಿ ವೈದ್ಯಕೀಯ ಕಾಲೇಜು ಸ್ಥಾಪನೆ ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ಬೃಹತ್ ಪ್ರತಿಭಟನೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. ೧೧:
ವಿಜಯಪುರ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಸಹಕಾರಿ ಸಹಭಾಗಿತ್ವದಲ್ಲೇ ಸ್ಥಾಪಿಸಬೇಕು. ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುವುದನ್ನು ವಿರೋಧಿಸಿ ಗುರುವಾರ ಸಾವಿರಾರು ವಿದ್ಯಾರ್ಥಿಗಳು ಜನಾಂದೋಲನ ರ್ಯಾಲಿ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ರ್ಯಾಲಿ ನಗರದ ಶಿವಾಜಿ ವೃತ್ತದಿಂದ ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಹೋರಾಟವನ್ನು ಉದ್ದೇಶಿಸಿ ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ ಅವರು ಮಾತನಾಡಿ, ಕಳೆದ ೨೦ ವರ್ಷಗಳಿಂದ ಡಿವಿಪಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕೆಂದು ಹೋರಾಟ ಮಾಡುತ್ತಾ ಬಂದಿದ್ದೇವೆ. ನಮ್ಮ ಮತ್ತು ಜನರ ಹೋರಾಟದ ಫಲವಾಗಿ ಇಂದು ಜಿಲ್ಲೆಗೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದ್ದು ಇಡೀ ಜಿಲ್ಲೆಯ ಜನರಿಗೆ ಖುಷಿ ಪಡುವ ವಿಚಾರ. ಆದರೆ ಇದರಲ್ಲಿ ಖಾಸಗಿ ಸಹಭಾಗಿತ್ವ ಅಂದರೆ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುವುದನ್ನು ಸಂಘಟನೆಯು ಒಪ್ಪುವುದಿಲ್ಲ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಎರಡು ಖಾಸಗಿ ಮೆಡಿಕಲ್ ಕಾಲೇಜುಗಳಿದ್ದು, ಇದಕ್ಕೆ ಕೋಟ್ಯಂತರ ಶುಲ್ಕ ಕಟ್ಟಲು ಸಾಧ್ಯವಾಗದೇ, ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಆಗದೆ ತಮ್ಮ ಆಶೆಯನ್ನೇ ಬಲಿಕೊಟ್ಟಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಡಿವಿಪಿ ಜಿಲ್ಲಾ ಸಂಚಾಲಕ ಅಕ್ಷಯಕುಮಾರ ಅಜಮನಿ ಮಾತನಾಡಿ, ಆರೋಗ್ಯ ಹಾಗೂ ಶಿಕ್ಷಣ ಸೇವಾ ವಲಯದಲ್ಲಿ ಕಾರ್ಯ ನಿರ್ವಹಿಸತಕ್ಕದ್ದು. ಅದು ಬಡವರ ಪರವಾಗಿರಬೇಕು. ಆದರೆ ಈ ಎರಡು ಕ್ಷೇತ್ರಗಳಲ್ಲಿ ವ್ಯಾಪಾರಿಗಳ ವ್ಯಾಪಾರ ಆರಂಭವಾಗಿದೆ. ಈಗಾಗಲೇ ಉನ್ನತ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಬಡವರಿಂದ ದೂರವಾಗುತ್ತಿವೆ. ಆರೋಗ್ಯ ಮತ್ತು ಶಿಕ್ಷಣ ಮಾರಾಟವಾಗುತ್ತಿರುವುದು ಈ ದೇಶದ ದುರಂತ. ಬಿಜೆಪಿ ಆಗಲಿ ಕಾಂಗ್ರೆಸ್ ಆಗಲಿ ಎರಡು ಪಕ್ಷಗಳು ಖಾಸಗಿಯವರಿಗೆ ಲಾಭ ತಂದುಕೊಡುವ ಪಕ್ಷಗಳಾಗಿವೆ ಎಂದು ಟೀಕಿಸಿದರು.
ಶಿಕ್ಷಣ ಎನ್ನುವುದು ಕೆಲವೇ ಜನರ ಸ್ವತ್ತಾಗದೆ, ಎಲ್ಲರ ಸ್ವತ್ತಾಗಬೇಕು. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗಬೇಕಾದರೆ, ಸರ್ಕಾರವೇ ಸಂಪೂರ್ಣ ಆರ್ಥಿಕ ಜವಾಬ್ದಾರಿ ತೆಗೆದುಕೊಳ್ಳಬೇಕು. ಆಗ ಮಾತ್ರ ಬಡವರು, ಕಾರ್ಮಿಕರು ಮತ್ತು ರೈತರ ಮಕ್ಕಳಿಗೆ ಶಿಕ್ಷಣ ಸಿಗುತ್ತದೆ ಎಂದು ಹೇಳಿದರು.
ವಿಜಯಪುರ ಜಿಲ್ಲೆಯು ನಿರಂತರವಾಗಿ ಬರಗಾಲಕ್ಕೆ ತುತ್ತಾಗುತ್ತ ಬಂದಿದ್ದು, ಬಹುತೇಕ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ಕಷ್ಟಪಟ್ಟು ಅಭ್ಯಾಸ ಮಾಡಿ ಮುಂದೆ ಬರಬೇಕೆಂದರೆ ಉನ್ನತ ಶಿಕ್ಷಣ ಪಡೆಯಲು ಇಡೀ ಜಿಲ್ಲೆಯಲ್ಲಿ ಒಂದೇ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ ಎಂದರು.
ಖಾಸಗಿ ಕಾಲೇಜುಗಳಲ್ಲಿ ಡೊನೇಷನ್ ಕೊಟ್ಟು ಕಲಿಯುವುದಂತೂ ನಮ್ಮ ಜಿಲ್ಲೆಯ ಬಡ ಶೋಷಿತ ಜನಗಳಿಗೆ, ರೈತ ಮತ್ತು ಕೂಲಿಕಾರ್ಮಿಕರ ಮಕ್ಕಳಿಗೆ ಖಂಡಿತ ಸಾಧ್ಯವಿಲ್ಲ. ಆದ್ದರಿಂದ ಸರ್ಕಾರವು ವಿಶೇಷ ಮುತುವರ್ಜಿ ವಹಿಸಿ ವಿಜಯಪುರ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕೆಂದು ಒತ್ತಾಯಿಸುತ್ತೇವೆ. ಇಲ್ಲವಾದಲ್ಲಿ ಈ ಹೋರಾಟ ಪ್ರಾರಂಭ ಮುಂದೆ ಜಿಲ್ಲೆಯನ್ನೇ ಬಂದ್ ಮಾಡಿ ಹೋರಾಟ ರೂಪಿಸಿ ಪ್ರತಿಭಟಿಸುತ್ತೇವೆ. ಯಾವುದೇ ಕಾರಣಕ್ಕೂ ಸರ್ಕಾರಿ ಕಾಲೇಜು ಭ್ರಷ್ಟರ ಕೈ ಗೆ ಹೋಗಲು ಬಿಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಚಿಂತಕರಾದ ಅನಿಲ್ ಹೊಸಮನಿ, ವಿದ್ಯಾವತಿ ಅಂಕಲಗಿ, ವೆಂಕಟೇಶ ವಗ್ಗೆಣ್ಣವರ, ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರಾದ ಮಾದೇಶ ಚಲವಾದಿ, ಸಂದೇಶ ಕುಮಟಗಿ, ಯಾಸಿನ್ ಇನಾಮದಾರ, ಯುವರಾಜ ಓಲೇಕಾರ, ಪ್ರತಾಪ, ಭೀಮು, ಶಂಕರ ಬಸರಗಿ, ದಾವೂದ್ ನಾಯ್ಕೋಡಿ, ಆದಿತ್ಯ, ಯಮನೂರಿ ಮಾದರ, ಯಮನೂರಿ ಸಿಂದಗಿರಿ, ರೂಪಾ, ಪ್ರೇಮಾ, ದೀಪಾ, ಪೂಜಾ, ರಂಜಾನಾ, ಕಾಲೇಜ ವಿದ್ಯಾರ್ಥಿಗಳು ಮತ್ತು ಸಾವಿರಾರು ಜನ ಯುವಜನರು ಭಾಗಿಯಾಗಿದ್ದರು.

Share