ಸರ್ಕಾರಕ್ಕೆ ರೈತರ ಡೆಡ್ಲೈನ್ | 25 ಸಾವಿರ ರೈತರೊಂದಿಗೆ ಹೋರಾಟದ ಎಚ್ಚರಿಕೆ
ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 14:
ಮಳೆ ಕೈಕೊಟ್ಟು ಸಂಕಷ್ಟಕ್ಕೆ ಸಿಲುಕಿರುವ ವಿಜಯಪುರ ಜಿಲ್ಲೆಯ ರೈತರ ಆಕ್ರೋಶಕ್ಕೆ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರುವ ಮೂಲಕ ರೈತ ಸಂಘ ಹೋರಾಟದ ಮುಂದಿನ ಹೆಜ್ಜೆ ಘೋಷಿಸಿದೆ. ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ 10 ದಿನಗಳ ಗಡುವು ವಿಧಿಸಲಾಗಿದೆ. ಈ ಗಡುವಿನೊಳಗೆ ಬೇಡಿಕೆ ಈಡೇರದಿದ್ದರೆ 25 ಸಾವಿರ ರೈತರನ್ನು ಸಂಘಟಿಸಿ ಸೊಲ್ಲಾಪುರ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ರೈತ ಸಂಘ ಎಚ್ಚರಿಸಿದೆ.
ರೈತರಿಗೆ ನ್ಯಾಯಯುತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಕಳೆದ 13 ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಭರವಸೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಮಹಾಂತೇಶ ಬಿರಾದಾರ ಅವರು ರೈತ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಬಳಿಕ ಸಚಿವ ಎಂ.ಬಿ. ಪಾಟೀಲ ಅವರು ದೂರವಾಣಿ ಮೂಲಕ ರೈತ ಮುಖಂಡರೊಂದಿಗೆ ಮಾತನಾಡಿ, ರೈತರ ಸಮಸ್ಯೆ ಸರ್ಕಾರದ ಗಮನದಲ್ಲಿದ್ದು, ಎಲ್ಲ 13 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಜಿಲ್ಲೆಯ ವಿವಿಧ ತಾಲೂಕುಗಳ ರೈತರ ಜಮೀನುಗಳಿಗೆ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಪರಿಶೀಲಿಸಲಾಗಿದೆ. ಮಳೆ ಕೊರತೆಯಿಂದ ರೈತರು ಅನುಭವಿಸಿರುವ ನಷ್ಟದ ಕುರಿತು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಗಮನಕ್ಕೂ ತರಲಾಗಿದೆ ಎಂದು ಪಾಟೀಲ ತಿಳಿಸಿದರು.
ಸಚಿವರ ಭರವಸೆಯನ್ನು ಪರಿಗಣಿಸಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲು ರೈತ ಮುಖಂಡರು ನಿರ್ಧರಿಸಿದರಾದರೂ, 10 ದಿನಗಳ ಗಡುವು ಮುಗಿಯುವವರೆಗೆ ಸರ್ಕಾರದ ಕ್ರಮವನ್ನು ಕಾದು ನೋಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, “10 ದಿನಗಳಲ್ಲಿ ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಬೇಕು. ಇಲ್ಲವಾದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಸಿದರು.
ಪ್ರತಿ ಎಕರೆಗೆ ₹50 ಸಾವಿರ ಪರಿಹಾರ, ಬೆಳೆ ವಿಮೆ ಪಾವತಿಸಿರುವ ಎಲ್ಲ ರೈತರಿಗೆ ಶೇ.50ರಷ್ಟು ಮಧ್ಯಂತರ ಪರಿಹಾರ, ಜಿಲ್ಲೆಯ ಕೆರೆ–ಕಾಲುವೆಗಳನ್ನು ತುಂಬಿಸುವುದು, ಜಾನುವಾರುಗಳಿಗೆ ಮೇವು ಒದಗಿಸುವುದು ಹಾಗೂ ನಿರುದ್ಯೋಗಿ ಕೃಷಿ ಕಾರ್ಮಿಕರಿಗೆ ವಿ.ಜಿ.-ರಾಮ್ಜಿ ಯೋಜನೆಯಡಿ 200 ದಿನಗಳ ಉದ್ಯೋಗ ನೀಡುವುದು ರೈತರ ಪ್ರಮುಖ ಬೇಡಿಕೆಗಳಾಗಿವೆ.
“ರೈತರ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸಬಾರದು. ಭರವಸೆ ಕಾರ್ಯರೂಪಕ್ಕೆ ಬರದಿದ್ದರೆ ಈ ಬಾರಿ ಹೋರಾಟ ಅಂಬೇಡ್ಕರ್ ವೃತ್ತಕ್ಕೆ ಸೀಮಿತವಾಗುವುದಿಲ್ಲ; ಸಾವಿರಾರು ರೈತರೊಂದಿಗೆ ರಾಷ್ಟ್ರೀಯ ಹೆದ್ದಾರಿಗೆ ಇಳಿಯಬೇಕಾಗುತ್ತದೆ” ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷರಾದ ಮಹದೇವ ಬನಸೋಡೆ, ಸಂಗಪ್ಪ ಟಕ್ಕೆ, ಅಂಬರೀಶ ಭೈರಗೊಂಡ, ಲಾಯಪ್ಪ ಇಂಗಳೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.


