ಸಪ್ತಸಾಗರ ವಾರ್ತೆ,ಬೆಂಗಳೂರು, ಜು. 23:
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ಇಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಒತ್ತಡ, ವೃತ್ತಿ ಅಸ್ಥಿರತೆ, ಭದ್ರತೆಯ ಕೊರತೆ ಹಾಗೂ ಡಿಜಿಟಲ್ ಯುಗದ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಪತ್ರಕರ್ತರ ಸುರಕ್ಷತೆ, ಸಾಮಾಜಿಕ ಭದ್ರತೆ ಹಾಗೂ ವೃತ್ತಿಪರ ಹಕ್ಕುಗಳನ್ನು ಖಾತರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರವೇ ಪತ್ರಕರ್ತರ ರಕ್ಷಣೆಗೆ ಪ್ರತ್ಯೇಕ ಕಾನೂನು ಜಾರಿಗೊಳಿಸಬೇಕು ಎಂದು 183ನೇ ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಒತ್ತಾಯಿಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮಹಿಳಾ ಕೊಠಡಿಯಲ್ಲಿ “183ನೇ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರ ಮುಂದಿರುವ ಸವಾಲುಗಳು” ವಿಷಯದಡಿ ಆಯೋಜಿಸಿದ್ದ ಸಮಾರಂಭದಲ್ಲಿ ಪತ್ರಿಕೋದ್ಯಮದ ಇತಿಹಾಸ, ವರ್ತಮಾನ ಪರಿಸ್ಥಿತಿ ಹಾಗೂ ಭವಿಷ್ಯದ ಸವಾಲುಗಳ ಕುರಿತು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಆಯೂಷ್ ಖಾನ್, ಪತ್ರಿಕಾ ದಿನಾಚರಣೆ ಆಚರಣೆಗಷ್ಟೇ ಸೀಮಿತವಾಗದೆ, ಪತ್ರಕರ್ತರ ಬದುಕು ಮತ್ತು ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಸಂಕಲ್ಪದ ದಿನವಾಗಬೇಕು ಎಂದರು. ಜನಪರ ಸುದ್ದಿಗಳನ್ನು ನಿರ್ಭೀತಿಯಿಂದ ಹೊರತರುವ ಪತ್ರಕರ್ತರು ಇಂದು ಹಲವು ರೀತಿಯ ಒತ್ತಡಗಳು ಹಾಗೂ ಬೆದರಿಕೆಗಳನ್ನು ಎದುರಿಸುತ್ತಿದ್ದು, ಅವರಿಗೆ ಸರ್ಕಾರ ಆರೋಗ್ಯ ವಿಮೆ, ಅಪಘಾತ ಪರಿಹಾರ, ನಿವೃತ್ತಿ ಸೌಲಭ್ಯ ಸೇರಿದಂತೆ ಸಮಗ್ರ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಜ್ಯಾಧ್ಯಕ್ಷೆ ಕೆ. ಶಾಂತಕುಮಾರಿ ಮಾತನಾಡಿ, ಕನ್ನಡ ಪತ್ರಿಕೋದ್ಯಮದ ಇತಿಹಾಸವನ್ನು ಸ್ಮರಿಸಿದರು. 1843ರಲ್ಲಿ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಅವರು ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಆರಂಭಿಸುವ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ಅಡಿಪಾಯ ಹಾಕಿದರು. ಅಂದಿನಿಂದ ಇಂದಿನವರೆಗೆ ಪತ್ರಿಕೆಗಳು ಸಮಾಜದಲ್ಲಿ ಜಾಗೃತಿ ಮೂಡಿಸುವುದು, ಪ್ರಜಾಪ್ರಭುತ್ವವನ್ನು ಬಲಪಡಿಸುವುದು ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮಾತನಾಡಿ, ಸರ್ಕಾರ ಮತ್ತು ಸಮಾಜದ ನಡುವೆ ಸೇತುವೆಯಾಗಿ ಕೆಲಸ ಮಾಡುವ ಪತ್ರಕರ್ತರು ಅನೇಕ ಸವಾಲುಗಳ ನಡುವೆಯೂ ಜನರ ಸಮಸ್ಯೆಗಳನ್ನು ಬೆಳಕಿಗೆ ತರುತ್ತಿದ್ದಾರೆ. ಅವರ ಸೇವೆಗೆ ಸಮರ್ಪಕ ಗೌರವ ಮತ್ತು ಭದ್ರತೆ ದೊರಕಬೇಕು ಎಂದು ಅಭಿಪ್ರಾಯಪಟ್ಟರು.
‘ಹಾಸನವಾಣಿ’ ದಿನಪತ್ರಿಕೆಯ ಸಂಪಾದಕಿ ಲೀಲಾವತಿ ಅವರು ತಮ್ಮ 45 ವರ್ಷಗಳ ಪತ್ರಿಕೋದ್ಯಮದ ಅನುಭವವನ್ನು ಹಂಚಿಕೊಂಡು, ಮೌಲ್ಯಾಧಾರಿತ ಪತ್ರಿಕೋದ್ಯಮದ ಅಗತ್ಯವನ್ನು ಒತ್ತಿ ಹೇಳಿದರು.
ಆಕಾಶವಾಣಿ ಹಾಗೂ ದೂರದರ್ಶನದ ಮಾಜಿ ನಿರ್ದೇಶಕ ಡಾ. ನಿರ್ಮಲ ಎಲಿಗಾರ್ ಮಾತನಾಡಿ, ಪತ್ರಕರ್ತರ ಮೇಲಿನ ಹಲ್ಲೆ, ಬೆದರಿಕೆ ಮತ್ತು ಸುಳ್ಳು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪತ್ರಕರ್ತರ ಸುರಕ್ಷತೆಗಾಗಿ ಪ್ರತ್ಯೇಕ ಕಾನೂನು ಜಾರಿಗೊಳಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ವಿಜಯನಗರ ಜಿಲ್ಲೆಯ ‘ಗಡಿನಾಡು’ ಪತ್ರಿಕೆಯ ವರದಿಗಾರ ಸೋಮಶೇಖರಯ್ಯ ಅವರು, ಡಿಜಿಟಲ್ ಯುಗದಲ್ಲಿ ಪತ್ರಕರ್ತರು ಎದುರಿಸುತ್ತಿರುವ ವೃತ್ತಿಪರ ಸವಾಲುಗಳು, ಸುಳ್ಳು ಸುದ್ದಿಗಳ ಹರಡುವಿಕೆ ಹಾಗೂ ಸಾಮಾಜಿಕ ಜಾಲತಾಣಗಳ ಪರಿಣಾಮದ ಕುರಿತು ಮಾತನಾಡಿದರು.
‘ಘರ್ಜಿಸುವ ವಾಣಿ’ ಪತ್ರಿಕೆಯ ಸಂಪಾದಕ ರಾಜೇಂದ್ರ ಅವರು, ಪತ್ರಕರ್ತರ ಮೇಲಿನ ದಾಳಿ ಮತ್ತು ಬೆದರಿಕೆ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರ ತ್ವರಿತವಾಗಿ ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗೊಳಿಸಿ, ನಿರ್ಭೀತ ಪತ್ರಿಕೋದ್ಯಮಕ್ಕೆ ಸೂಕ್ತ ವಾತಾವರಣ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ಪತ್ರಕರ್ತರಿಗೆ ಸನ್ಮಾನ
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರು, ಸಂಪಾದಕರು ಹಾಗೂ ವರದಿಗಾರರನ್ನು ಸನ್ಮಾನಿಸಲಾಯಿತು.
183ನೇ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟವು ಸನ್ಮಾನಿಸಿತು.
ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಅಧ್ಯಕ್ಷ ಬಸವೇಗೌಡ, ‘ಇಂದು ಸಂಜೆ’ ಪತ್ರಿಕೆಯ ಸಂಪಾದಕಿ ಪದ್ಮಾ ನಾಗರಾಜ್, ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಎಂ.ಎಸ್. ಮಣಿ, ಉರ್ದು ದಿನಪತ್ರಿಕೆ ‘ಪಾಸ್ವಾನ್’ ಮುಖ್ಯ ವರದಿಗಾರ ಅಬ್ದುಲ್ ಖ್ವಾಲಿಕ್, ತೆಲುಗು ದಿನಪತ್ರಿಕೆ ‘ಈನಾಡು’ ಹಿರಿಯ ವರದಿಗಾರ್ತಿ ಜಗದೀಶ್ವರಿ, ಜನಶಕ್ತಿ ಮೀಡಿಯಾದ ಎಸ್. ವೈ. ಗುರುಶಾಂತ್, ‘ಪ್ರಜಾ ಸಮಯ’ ಪತ್ರಿಕೆಯ ಸಂಪಾದಕ ಎಸ್. ಪಾಟೀಲ ಹಾಗೂ ‘ಕರುನಾಡ ದಿಗಂತ’ ಪತ್ರಿಕೆಯ ಆರ್. ಶಿವಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪತ್ರಕರ್ತರು, ಸಂಪಾದಕರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.


