ಜ್ಞಾನೇಶಕುಮಾರ್ ರಾಜೀನಾಮೆಗೆ ಆಗ್ರಹ: ಲಾಠಿಚಾರ್ಜ್ ಖಂಡಿಸಿ ಪ್ರತಿಭಟನೆ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 11:
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಮೇಲಿನ ಲಾಠಿಚಾರ್ಜ್ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ವೇದಿಕೆಯ ನೇತೃತ್ವದಲ್ಲಿ ಭಾನುವಾರ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಭಗವಾನ್ ರೆಡ್ಡಿ ಮಾತನಾಡಿ, ಕೇಂದ್ರ ಗೃಹ ಇಲಾಖೆ ಪ್ರಜಾಸತ್ತಾತ್ಮಕ ಹೋರಾಟಗಳನ್ನು ಹತ್ತಿಕ್ಕಲು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿಚಾರ್ಜ್ ಮಾಡಿ, ರಸ್ತೆಗೆ ಬೀಳಿಸಿ ಎಳೆದಾಡಿರುವ ದೃಶ್ಯಗಳು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಗಿವೆ ಎಂದು ಹೇಳಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ ಮಾತನಾಡಿ, ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಹಾಗೂ ಕಾನೂನುಬಾಹಿರವಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಲಾದ ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಎದ್ದೇಳು ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ಅಬ್ದುಲ್ ಖಾದರ್ ಮಾತನಾಡಿ, ಕೇಂದ್ರ ಸರ್ಕಾರ ಸಂವಿಧಾನವನ್ನು ಆಟದ ಗೊಂಬೆಯನ್ನಾಗಿ ಮಾಡಿಕೊಂಡು ಫ್ಯಾಸಿಸ್ಟ್ ನೀತಿಯನ್ನು ಹೇರುತ್ತಿದೆ ಎಂದು ಆರೋಪಿಸಿದರು.
ಮಹಿಳಾ ಮುಖಂಡೆ ಸುರೇಖಾ ರಜಪೂತ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಮುಖಂಡೆ ಸುನಂದಾ ನಾಯಕ, ಹೋರಾಟಗಾರರಾದ ಲಕ್ಷ್ಮಣ ಹಂದ್ರಾಳ, ಸುರೇಶ ಬಿಜಾಪುರ, ಸಿದ್ದರಾಮಯ್ಯ ಹಿರೇಮಠ, ಫಯಾಜ್ ಕಲಾದಗಿ ಸೇರಿದಂತೆ ಹಲವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಎಚ್.ಟಿ., ಭರತಕುಮಾರ ಎಚ್.ಟಿ., ಬಾಳು ಜೇವೂರ, ಸಿದ್ದಲಿಂಗ ಬಾಗೇವಾಡಿ, ಶಿವಬಾಳಮ್ಮ ಕೊಂಡಗೂಳಿ, ಶಿವರಂಜಿನಿ ಎಸ್.ಬಿ., ಸುವರ್ಣಾ ಹಳಗಣಿ, ಸುಮಂಗಲಾ ಆನಂದ ಶೆಟ್ಟಿ, ಸುರೇಖಾ ವಾಘಮೊರೆ, ಖಾಜಾಸಾಬ್, ಬೀರ್‌ಕಬ್ಬಿ ಸಾಹುಕಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this