ಪಿಂಚಣಿದಾರರ ಬಾಕಿ ಹಣ ಕೂಡಲೇ ಬಿಡುಗಡೆಗೆ ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 20:
ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುವವರ ಆದಾಯ ಮಿತಿಯನ್ನು ₹32 ಸಾವಿರದಿಂದ ₹1.20 ಲಕ್ಷಕ್ಕೆ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವಿಜಯಪುರ ಜಿಲ್ಲಾ ಸಮಿತಿ ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದೆ.
ಈ ಕುರಿತು ಒಕ್ಕೂಟದ ವಿಜಯಪುರ ಜಿಲ್ಲಾ ಅಧ್ಯಕ್ಷ ವಿನೋದ ಎಂ. ಖೇಡ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರವು ಸುಮಾರು 6–7 ತಿಂಗಳ ಹಿಂದೆ ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುವವರ ಆದಾಯ ಮಿತಿಯನ್ನು ₹32 ಸಾವಿರಕ್ಕೆ ನಿಗದಿಪಡಿಸಿತ್ತು. ಇದರಿಂದ ವಿಕಲಚೇತನರು, ಹಿರಿಯ ನಾಗರಿಕರು, ವಿಧವೆಯರು ಸೇರಿದಂತೆ ಲಕ್ಷಾಂತರ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಂಡು ತೀವ್ರ ಸಂಕಷ್ಟ ಎದುರಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ಅಂಗವಿಕಲರ ಸಂಘಟನೆಗಳೊಂದಿಗೆ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು ಎಂದು ಖೇಡ ತಿಳಿಸಿದ್ದಾರೆ.
ಸಂಘಟನೆಗಳ ಹೋರಾಟಕ್ಕೆ ಸ್ಪಂದಿಸಿ ಸರ್ಕಾರವು ಆದಾಯ ಮಿತಿಯನ್ನು ₹32 ಸಾವಿರದಿಂದ ₹1.20 ಲಕ್ಷಕ್ಕೆ ಹೆಚ್ಚಿಸಿರುವುದು ಸ್ವಾಗತಾರ್ಹ ಕ್ರಮವಾಗಿದ್ದು, ಇದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ಆದರೆ, ಕಳೆದ 6–7 ತಿಂಗಳಿಂದ ಸ್ಥಗಿತಗೊಂಡಿರುವ ಪಿಂಚಣಿ ಮೊತ್ತವನ್ನು ಫಲಾನುಭವಿಗಳಿಗೆ ಕೂಡಲೇ ಬಿಡುಗಡೆ ಮಾಡಬೇಕು. ಆರ್ಥಿಕ ಸಂಕಷ್ಟದಲ್ಲಿರುವ ವಿಕಲಚೇತನರು, ಹಿರಿಯ ನಾಗರಿಕರು, ವಿಧವೆಯರು ಹಾಗೂ ಇತರ ಫಲಾನುಭವಿಗಳಿಗೆ ಬಾಕಿ ಪಿಂಚಣಿ ಬಿಡುಗಡೆ ಮಾಡುವ ಮೂಲಕ ಸರ್ಕಾರ ನೆರವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಎ.ಎ. ವಾಲಿಕಾರ, ಎಂ.ಬಿ. ಉಮರಾಣಿ, ಕಲ್ಲಯ್ಯ, ಮಲ್ಲಪ್ಪ, ನಿಮಿಶ ಆಚಾರ್ಯ, ಮಹೇಶ ಮುಧೋಳ, ಗಣೇಶ ದೊಣೆ, ರಾಜು ತಡವಲಗಿ, ಅಂಬಿಕಾ ಕೊಪ್ಪದ, ಪ್ರಶಾಂತ, ಸಂತೋಷ ಕಲಗುಡಿ, ಅಶೋಕ ಚೋಳಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this