ಸಪ್ತಸಾಗರ ವಾರ್ತೆ,ವಿಜಯಪುರ, ಆ. 21: ನಗರ ಹಾಗೂ ಜಿಲ್ಲೆಯಾದ್ಯಂತ ಯಾವುದೇ ಅಧಿಕೃತ ಅನುಮತಿ ಪಡೆಯದೆ ಹಾಗೂ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಪಿಜಿ ಹಾಗೂ ಖಾಸಗಿ ಸ್ಟಡಿ ಲೈಬ್ರರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಶೋಕ ಧಾಮ ಫೌಂಡೇಶನ್ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಫೌಂಡೇಶನ್ ಪದಾಧಿಕಾರಿಗಳು, ಇತ್ತೀಚಿನ ದಿನಗಳಲ್ಲಿ ವಿಜಯಪುರ ನಗರದಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಕೆಲವರು ದುರುಪಯೋಗಪಡಿಸಿಕೊಂಡು ನಿಯಮಬಾಹಿರವಾಗಿ ಪಿಜಿ ಮತ್ತು ಖಾಸಗಿ ಸ್ಟಡಿ ಲೈಬ್ರರಿಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಫೌಂಡೇಶನ್ ಗೌರವ ಅಧ್ಯಕ್ಷ ಪ್ರಕಾಶ ಮಿರ್ಜಿ ಮಾತನಾಡಿ, ಬಹುತೇಕ ಪಿಜಿ ಹಾಗೂ ಲೈಬ್ರರಿಗಳು ಮಹಾನಗರ ಪಾಲಿಕೆಯಿಂದ ಅಗತ್ಯ ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುತ್ತಿವೆ. ಕೆಲವು ಕಡೆ ಅಗ್ನಿಶಾಮಕ ಇಲಾಖೆಯ ನಿರಾಕ್ಷೇಪಣಾ ಪತ್ರ (ಎನ್‌ಒಸಿ), ತುರ್ತು ನಿರ್ಗಮನ ದ್ವಾರಗಳು ಸೇರಿದಂತೆ ಅಗತ್ಯ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಕಿರಿದಾದ ಕಟ್ಟಡ ಹಾಗೂ ಮನೆಗಳಲ್ಲಿ ಇವುಗಳನ್ನು ನಡೆಸಲಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಕೂಡಲೇ ಪರಿಶೀಲನೆ ನಡೆಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಾಜ ಸೇವಕ ಹಾಗೂ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಕೆಲವು ಪಿಜಿ ಹಾಗೂ ಲೈಬ್ರರಿಗಳಲ್ಲಿ ಭದ್ರತಾ ಲೋಪಗಳು ಕಂಡುಬರುತ್ತಿವೆ. ಹಲವು ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ವಿದ್ಯಾರ್ಥಿಗಳ ಪ್ರವೇಶ-ನಿರ್ಗಮನದ ದಾಖಲಾತಿ ರಿಜಿಸ್ಟರ್‌ಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ, ಅದರಲ್ಲೂ ಯುವತಿಯರ ಸುರಕ್ಷತೆ ಕುರಿತು ಆತಂಕ ಮೂಡಿದೆ ಎಂದರು.
ಮಹಾನಗರ ಪಾಲಿಕೆ, ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಗಳು ಜಂಟಿಯಾಗಿ ನಗರದಲ್ಲಿರುವ ಎಲ್ಲಾ ಪಿಜಿ ಹಾಗೂ ಖಾಸಗಿ ಸ್ಟಡಿ ಲೈಬ್ರರಿಗಳ ಕಡ್ಡಾಯ ತಪಾಸಣೆ ನಡೆಸಬೇಕು. ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಅಶೋಕ ಧಾಮ ಫೌಂಡೇಶನ್ ಪದಾಧಿಕಾರಿಗಳಾದ ಮಧೂರ, ಶಶಿಧರ, ಅಭಿಲಾಷ, ಪ್ರಕಾಶ ಮಿರ್ಜಿ, ಲಖನ್ ಹಾಗೂ ವಿಶ್ವಾರಾಧ್ಯ ವಾಲಿಕಾರ ಉಪಸ್ಥಿತರಿದ್ದರು.
ಅನಧಿಕೃತ ಪಿಜಿ, ಖಾಸಗಿ ಲೈಬ್ರರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ


