ಬಸವ ಜನ್ಮಸ್ಥಳ ಇಂಗಳೇಶ್ವರದಿಂದ ಕೂಡಲ ಸಂಗಮದವರೆಗೆ ಹೊಸ ರೈಲು ಮಾರ್ಗಕ್ಕೆ ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಆ.2: ವಿಶ್ವಗುರು ಬಸವಣ್ಣ ಅವರ ಜನ್ಮಸ್ಥಳ ಇಂಗಳೇಶ್ವರದಿಂದ ಬಸವಕಲ್ಯಾಣ ಮಾರ್ಗವಾಗಿ ಐಕ್ಯಸ್ಥಳ ಕೂಡಲ ಸಂಗಮದವರೆಗೆ ಹೊಸ ರೈಲು ಮಾರ್ಗ ನಿರ್ಮಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.
ಇಂಗಳೇಶ್ವರ ಗ್ರಾಮದ ಅಗ್ಗಳ ಕವಿ ಪ್ರತಿಷ್ಠಾನ ಹಾಗೂ ಗ್ರಾಮಸ್ಥರ ಪರವಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಅಪರ ಜಿಲ್ಲಾಧಿಕಾರಿ ಈದ್ರಾಮ್ ಅವರ ಮೂಲಕ ಶನಿವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಗ್ಗಳ ಕವಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ನಾಗಪ್ಪ ಚಿಗರಿ ಮಾತನಾಡಿ, ಇಂಗಳೇಶ್ವರದಿಂದ ಆರಂಭವಾಗುವ ರೈಲು ಮಾರ್ಗವು ಹಡಪದ ಅಪ್ಪಣ್ಣನ ಜನ್ಮಸ್ಥಳ ಮಸಬಿನಾಳ, ನೂಳಿಯ ಚಂದಯ್ಯನ ಊರಾದ ಶಿವಣಗಿ, ಮಡಿವಾಳ ಮಾಚಿದೇವರ ಜನ್ಮಸ್ಥಳ ದೇವರಹಿಪ್ಪರಗಿ, ಗೊಲ್ಲಾಳೇಶ್ವರ ಜನ್ಮಸ್ಥಳ ಗೋಳಗೇರಿ ಸೇರಿದಂತೆ ಬಸವಕಲ್ಯಾಣದವರೆಗೆ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಬಸವಕಲ್ಯಾಣದಿಂದ ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮದವರೆಗೆ ರೈಲು ಮಾರ್ಗ ವಿಸ್ತರಿಸಿದರೆ ಶರಣರ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರು ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರೇವಣಸಿದ್ದ ಅಗಳಿ, ದತ್ತಾತ್ರೇಯ ಕುಲಕರ್ಣಿ, ಅಶೋಕ ಕುಲಕರ್ಣಿ, ಅವ್ವಪ್ಪ ಸಣ್ಣಿ, ಸೋಮು ದೇವೂರ ಹಾಗೂ ಗಿರೀಶ ಕುಲಕರ್ಣಿ ಉಪಸ್ಥಿತರಿದ್ದರು.

Share this