ಸಪ್ತಸಾಗರ ವಾರ್ತೆ,ಮುದ್ದೇಬಿಹಾಳ, ಆ. 14:
371 ಜೆ ಮೀಸಲಾತಿ ವ್ಯಾಪ್ತಿಯಿಂದ ಹೊರಗುಳಿದಿರುವ ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕ ಮೀಸಲಾತಿ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ವಿಕಲಚೇತನರ ವಿವಿಧೋದ್ದೇಶ, ಗ್ರಾಮೀಣ ಪುನರ್ವಸತಿ, ನಗರ ಪುನರ್ವಸತಿ ರಾಜ್ಯ ಒಕ್ಕೂಟ ಹಾಗೂ ತಾಲೂಕು ವಿಕಲಚೇತನರ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶೇಷ ಚೇತನರ ವಿವಿಧೋದ್ದೇಶಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಎಸ್.ಕೆ. ಘಾಟಿ ಮಾತನಾಡಿ, ಡಾ. ಡಿ.ಎಂ. ನಂಜುಂಡಪ್ಪ ವರದಿ ಆಧಾರದ ಮೇಲೆ ರಾಜ್ಯದ ಹಿಂದುಳಿದ ಜಿಲ್ಲೆಗಳಿಗೆ 371 ಜೆ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಮೀಸಲಾತಿ ಪಡೆದಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗಿಂತಲೂ ಹಿಂದುಳಿದಿರುವ ವಿಜಯಪುರ ಜಿಲ್ಲೆಯನ್ನು ಈ ಸೌಲಭ್ಯದಿಂದ ಹೊರಗಿಟ್ಟಿರುವುದು ಜಿಲ್ಲೆಯ ಜನರಿಗೆ ಮಾಡಿರುವ ದೊಡ್ಡ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಗೆ 371 ಜೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಕುರಿತು ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಶಿಫಾರಸು ಕಳುಹಿಸಿ, ಜಿಲ್ಲೆಯ ಜನರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಪದವೀಧರರ ಒಕ್ಕೂಟದ ಮುಖಂಡ ಚಂದ್ರಶೇಖರ ಹೊಸಮನಿ ಮಾತನಾಡಿ, ರಾಜ್ಯದಲ್ಲಿ ಪ್ರತಿಯೊಂದು ವಿಷಯದಲ್ಲೂ ಅನ್ಯಾಯಕ್ಕೆ ಒಳಗಾಗುತ್ತಿರುವ ಜಿಲ್ಲೆ ವಿಜಯಪುರವಾಗಿದೆ. ಅಖಂಡ ಹೈದರಾಬಾದ್ ಪ್ರಾಂತ್ಯದ ಭಾಗವಾಗಿದ್ದ ವಿಜಯಪುರ ಜಿಲ್ಲೆಯನ್ನು 371 ಜೆ ಮೀಸಲಾತಿಯಿಂದ ಹೊರಗಿಟ್ಟಿರುವುದು ಖಂಡನೀಯ ಎಂದರು.
ವಿಜಯಪುರ ಜಿಲ್ಲೆಯ ಸಾರಿಗೆ ವ್ಯವಸ್ಥೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಕಲಬುರಗಿ ಉಚ್ಚ ನ್ಯಾಯಾಲಯದ ಪೀಠ, ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಸೇರಿದಂತೆ ಹಲವು ಇಲಾಖೆಗಳ ಆಡಳಿತಾತ್ಮಕ ಸಂಪರ್ಕ ಕಲಬುರಗಿ ವಿಭಾಗದೊಂದಿಗೆ ಇದ್ದರೂ, ವಿಜಯಪುರ ಜಿಲ್ಲೆಯನ್ನು 371 ಜೆ ವ್ಯಾಪ್ತಿಗೆ ಸೇರಿಸದಿರುವುದು ತಾರತಮ್ಯವಾಗಿದೆ ಎಂದು ಹೇಳಿದರು.
ಜಿಲ್ಲೆಯ ಶಾಸಕರು ಹಾಗೂ ಸಚಿವರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಧ್ವನಿ ಎತ್ತಿ, ವಿಜಯಪುರ ಜಿಲ್ಲೆಯನ್ನು 371 ಜೆ ಮೀಸಲಾತಿ ವ್ಯಾಪ್ತಿಗೆ ಸೇರ್ಪಡೆಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಈರಣ್ಣ ತಾರನಾಳ, ಬಸವರಾಜ ನಾಯ್ಕೋಡಿ, ಪವಾಡೆಪ್ಪ ಚಲವಾದಿ, ಗುರುರಾಜ ಡಂಬಳ, ಮಂಜುನಾಥ ಬಿರಾದಾರ, ಸುದೀಪ ಚಲವಾದಿ, ಸಂಗಮ್ಮ ಜಂಬಗಿ, ಸಂಗನಗೌಡ ಬಗಲಿ, ಶಶಿಕಾಂತ ಯಾಳಗಿ, ಪ್ರಭುಗೌಡ ಚಿಂಚೋಲಿ, ಮಹಾದೇವ ಮಾದಿನಾಳ, ರುದ್ರಗೌಡ ಜಿ. ಗೌಡರ, ಶಿವಪುತ್ರ ಮೋಟಗಿ, ಉಮೇಶ ಸಾತಿ, ನಾಗೇಶ ಅಮರಾವತಿ, ಬಾಲಪ್ಪ ಬಿಸಲದಿನ್ನಿ, ಅಡಿವೆಪ್ಪ ಪಡಗಾನೂರ, ಎಸ್.ಸಿ. ಮೇಟಿ, ಯಲ್ಲಪ್ಪ ಮಾದರ, ಸಂಗೀತಾ ಕೋಳೂರ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ವಿಜಯಪುರ ಜಿಲ್ಲೆಗೆ 371 ಜೆ ಮೀಸಲಾತಿ ತಕ್ಷಣ ಒದಗಿಸಲು ಆಗ್ರಹ


