ಶಿಕ್ಷಕರ ನೇಮಕಾತಿ ಗೊಂದಲ ನಿವಾರಣೆಗೆ ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 14: ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಗತ್ಯ ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿ ಮಾಡಬೇಕು ಹಾಗೂ ನೇಮಕಾತಿ ಅಧಿಸೂಚನೆಯಲ್ಲಿರುವ ಗೊಂದಲಗಳನ್ನು ಕೂಡಲೇ ನಿವಾರಿಸಬೇಕು ಎಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪುಜಾರಿ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಶಾಲೆಗಳ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಇಂಗ್ಲಿಷ್ ಶಿಕ್ಷಕರ ಹುದ್ದೆಗಳನ್ನು ಸೃಷ್ಟಿಸಿ, ಖಾಲಿ ಹುದ್ದೆಗಳ ಜತೆಗೆ ಹೊಸ ಹುದ್ದೆಗಳಿಗೂ ನೇಮಕಾತಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 250ಕ್ಕೂ ಹೆಚ್ಚು ಇಂಗ್ಲಿಷ್ ಶಿಕ್ಷಕರ ಹುದ್ದೆಗಳು ಲಭ್ಯವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಗಣಿತ, ಸಮಾಜ ವಿಜ್ಞಾನ ಹಾಗೂ ಉರ್ದು ವಿಷಯಗಳ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿರುವ ಗೊಂದಲಗಳನ್ನು ಕೂಡಲೇ ನಿವಾರಿಸಿ, ಅರ್ಹ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಅರ್ಹತಾ ಮಾನದಂಡಗಳನ್ನು ಸ್ಪಷ್ಟವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ದ್ವಿಭಾಷಾ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಪ್ರಮಾಣದಲ್ಲಿ ಶಿಕ್ಷಕರನ್ನು ನೇಮಿಸಬೇಕು. ಹೊಸ ಶಾಲೆಗಳು ಹಾಗೂ ಶಿಕ್ಷಣ ವ್ಯವಸ್ಥೆಗಳನ್ನು ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಅರ್ಹ ಶಿಕ್ಷಕರ ಅಗತ್ಯತೆ ಹೆಚ್ಚಾಗಿದ್ದು, ಶಿಕ್ಷಕರ ನೇಮಕಾತಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಇಂಗ್ಲಿಷ್, ಗಣಿತ, ಸಮಾಜ ವಿಜ್ಞಾನ ಹಾಗೂ ಉರ್ದು ಸೇರಿದಂತೆ ಅಗತ್ಯವಿರುವ ಎಲ್ಲ ವಿಷಯಗಳ ಶಿಕ್ಷಕರ ನೇಮಕಾತಿಯನ್ನು ಶೀಘ್ರ ಪೂರ್ಣಗೊಳಿಸಿ, ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ನಗರ ಅಧ್ಯಕ್ಷ ಹುಚ್ಚಪ್ಪ ಬಾವಿಮನಿ, ಡಿವಿಪಿ ಕಾರ್ಯದರ್ಶಿ ಯಾಸೀನ, ಉಪಾಧ್ಯಕ್ಷ ದಾವುದ, ಯಮನಪ್ಪ, ಮಡಿವಾಳಪ್ಪ ಬಡಿಗೇರ, ದೇವರಾಜ್, ನಾಗರಾಜ್ ಮಾಳಿಂಗರಾಯ, ಗಣೇಶ ಪಿರಪ್ಪ, ವಿಜಯಲಕ್ಷ್ಮಿ, ಸತ್ಯವ್ವ, ಪುಷ್ಪ, ಯಮನಪ್ಪ ಪೂಜಾರಿ, ಶಿವರಾಜ ಯಾಳವಾರ, ದೇವು ಕೊಪ್ಪಳ, ಕಾಶಿಬಾಯಿ ಯಾಳವಾರ, ಲಕ್ಷ್ಮಿಬಾಯಿ ಮಜ್ಜಿಗಿ, ಶಿಲ್ಪಾ, ಶ್ರೀದೇವಿ ಬಾಗೇವಾಡಿ, ನಾಗಮ್ಮ ಯಾದಗಿರಿ, ಪೂರ್ಣಿಮಾ, ಆಕಾಶ, ಹಣಮಂತ, ಮಾಳಪ್ಪ, ಯಲ್ಲಪ್ಪ, ನಿಂಗಪ್ಪ, ದಿನೇಶ್, ನರಸಿಂಹ, ನಾಗರಾಜ, ಪವಿತ್ರ, ಮೌನೇಶ, ದೇವಮ್ಮ, ರಕ್ಷಿತಾ, ರಾಧಿಕಾ, ಮಹಾಲಕ್ಷ್ಮಿ, ವಿದ್ಯಾಶ್ರೀ, ಅಭಿಷೇಕ, ಪರಶುರಾಮ, ಉಮೇಶ, ರಾಜಶೇಖರ, ಪ್ರಕಾಶ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this