ಸಪ್ತಸಾಗರ ವಾರ್ತೆ ವಿಜಯಪುರ, ಆ. 30:
ಅರಣ್ಯ ಇಲಾಖೆಯಿಂದ ಕುರಿಗಾರರ ಮೇಲೆ ಆಗುತ್ತಿರುವ ಕಿರುಕುಳ, ದೌರ್ಜನ್ಯ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕುರಿಗಾರರ ಸಂಘದ ಅಧ್ಯಕ್ಷ ಬೀರಪ್ಪ ಜುಮನಾಳ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಕೆಲವು ಕಡೆ ಅರಣ್ಯ ಪ್ರದೇಶಗಳಲ್ಲಿ ವಿನಾಕಾರಣ ಕುರಿಗಾರರ ಮೇಲೆ ದಬ್ಬಾಳಿಕೆ, ಬಲತ್ಕಾರ ನಡೆದಿರುವುದು ಕಂಡುಬರುತ್ತದೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ತಮ್ಮ ಸಿಬ್ಬಂದಿಗಳಿಗೆ ಸರ್ಕಾರದ ನೀತಿ ನಿಯಮಗಳ ಹೊರತುಪಡಿಸಿ ನಮ್ಮ ಕುರಿಗಾರರೊಂದಿಗೆ ಸಂಘರ್ಷಕ್ಕೆ ಇಳಿಯಬಾರದು ಎಂದು ಸೂಕ್ತ ತಿಳುವಳಿಕೆ ನೀಡಬೇಕೆಂದು ಅವರು ಕೇಳಿಕೊಂಡಿದ್ದಾರೆ.
ಕುರಿಗಾರರು ಅನಕ್ಷರಸ್ಥರು, ಮುಗ್ಧರು ಇರುವ ಕಾರಣ ಕೆಲವು ಕಡೆ ವಿನಾಕಾರಣ ದೌರ್ಜನ್ಯ ಪ್ರಕರಣಗಳು ಕುರಿ, ಮೇಕೆಗಳನ್ನು ಬಲತ್ಕಾರದಿಂದ ಒಯ್ಯುವುದು, ಅವರಿಗೆ ದಂಡ ವಸೂಲ ಮಾಡುವುದು, ವಸ್ತುಗಳನ್ನು ಕಸಿದುಕೊಂಡು ಒಯ್ಯುವುದು ತಿಳಿದು ಬಂದಿದೆ. ಇಂತಹ ಕೃತ್ಯಗಳು ನಡೆಯದಂತೆ ಜಿಲ್ಲಾ ಆಡಳಿತ ಕ್ರಮ ಕೈಗೊಳ್ಳಬೇಕು. ಕುರಿಗಾರರು ಕೂಡ ತಮಗೆ ಯಾವುದೇ ಬಲಾತ್ಕಾರ, ದೌರ್ಜನ್ಯ, ಕಳ್ಳತನ ಮುಂತಾದ ಹೀನ ಕೃತ್ಯಗಳ ನಡೆದರೆ ಸಮೀಪದ ಪೊಲೀಸ್ ಠಾಣೆಗಳಿಗೆ ಬೇಗನೆ ತಿಳಿಸಬೇಕು ಎಂದು ಜುಮನಾಳ ಕೋರಿದ್ದಾರೆ.
ಕುರಿಗಾರರ ಮೇಲಿನ ದೌರ್ಜನ್ಯ ತಡೆಗೆ ಆಗ್ರಹ
