ಸಪ್ತಸಾಗರ ವಾರ್ತೆ, ವಿಜಯಪುರ, ಜ. 27:
ದೇಶದ ಐಕ್ಯತೆಗೆ, ಒಗ್ಗಟ್ಟಿಗೆ ಹಾಗೂ ಸಮಗ್ರತೆಗೆ ಬಾಂಗ್ಲಾ ನಿವಾಸಿಗಳನ್ನು ಕೂಡಲೇ ಗಡಿಪಾರುಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಕೇಂದ್ರ ಗೃಹ ಸಚಿವ ಅಮಿಶ್ ಶಾ ಅವರಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದ ಕರ್ನಾಟಕ ಬಾಂಗ್ಲಾ ನಿವಾಸಿಗಳ ತವರೂರಾಗಿದೆ. ರಾಜ್ಯದೆಲ್ಲೆಡೆ ಬಾಂಗ್ಲಾ ನಿವಾಸಿಗಳು ಅಕ್ರಮವಾಗಿ ನೆಲೆಸಿದ್ದಲ್ಲದೆ, ಆಧಾರ್ ಕಾರ್ಡ್ ಸೇರಿದಂತೆ ಅನೇಕ ಗುರುತಿನ ಚೀಟಿಯನ್ನು ಪಡೆದು ಸ್ಥಳೀಯ ದೇಶವಾಸಿಗಳಿಗೆ ಸಲ್ಲಬೇಕಾಗಿದ್ದ ಸಂಪನ್ಮೂಲಗಳನ್ನು ಬಳಸುತ್ತಿರುವುದು ದುರದೃಷ್ಟಕರ. ಇಲ್ಲಿ ದುಡಿಯುವ ಹಣವನ್ನು ಬಾಂಗ್ಲಾದೇಶಕ್ಕೆ ರವಾನಿಸಿ, ಭಾರತವನ್ನು ಅಭದ್ರಗೊಳಿಸಲು ಉಗ್ರ ಸಂಘಟನೆಗಳಿಗೆ ನೆರವು ನೀಡುತ್ತಿರುವ ಬಗ್ಗೆಯೂ ಗೊತ್ತಾಗಿದೆ.
ಕಾಫಿ ತೋಟ, ತ್ಯಾಜ್ಯ ನಿರ್ವಹಣಾ ಘಟಕ, ಮನೆ ಹಾಗೂ ಅಪಾರ್ಟ್ಮೆಂಟ್ ಗಳಲ್ಲಿ ಮನೆಗೆಲಸ, ಚಾಲಕ, ಚಿಂದಿ ಆಯುವ ಕೆಲಸವನ್ನು ಮಾಡಿಕೊಂಡು ಭಾರತವನ್ನೇ ತಮ್ಮ ನೆಲೆಯನ್ನಾಗಿ ಮಾಡಿಕೊಂಡಿರುವುದನ್ನು ಮಾಧ್ಯಮಗಳು, ಹಿಂದೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬಯಲಿಗೆಳಿದಿದ್ದಾರೆ. ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ ಸಹ ಅಕ್ರಮ ಬಾಂಗ್ಲಾದೇಶಿ ವಾಸಿಗಳನ್ನು ಹುಡುಕಿಕೊಟ್ಟ ಮಾಧ್ಯಮ, ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಸರ್ಕಾರ ಪರೋಕ್ಷವಾಗಿ ಅವರ ಪರವೇ ನಿಂತಿದೆ.
ರಾಜ್ಯದಲ್ಲಿರುವ ಪ್ರತಿಯೊಬ್ಬ ಬಾಂಗ್ಲಾದೇಶೀಯರನ್ನು ಎಸ್.ಐ.ಆರ್ ಮಾದರಿಯಂತೆ ಪತ್ತೆ ಮಾಡುವುದು, ಅವರ ದಾಖಲಾತಿಯನ್ನು ಅಳಿಸುವುದು ಹಾಗೂ ಅವರ ದೇಶಕ್ಕೆ ಗಡಿಪಾರು ಮಾಡುವ ಮಾದರಿಯಲ್ಲಿ ಹುಡುಕಿ ಅವರನ್ನು ಗಡಿಪಾರು ಮಾಡುವಂತೆ ಸವಿವರವಾಗಿ ಪತ್ರದಲ್ಲಿ ವಿವರಿಸಿರುವುದಾಗಿ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಬಾಂಗ್ಲಾ ನಿವಾಸಿಗಳನ್ನು ಗಡಿಪಾರು ಮಾಡಿ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಯತ್ನಾಳ ಟ್ವೀಟ್


