ಪತ್ರಕರ್ತರ ಆರೋಗ್ಯ ಹಿತರಕ್ಷಣೆಗೆ ಠೇವಣಿ: ಸಚಿವ ಎಂ.ಬಿ. ಪಾಟೀಲ್ ಘೋಷಣೆ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 19 : ಪತ್ರಕರ್ತರ ಸಕಲ ಸಮಸ್ಯೆ ನಿವಾರಣೆಗಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವ ಜೊತೆಗೆ ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ 5 ಲಕ್ಷ ರೂ.ಗಳ ಠೇವಣಿ ಇರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಘೋಷಿಸಿದರು.
ಶನಿವಾರ ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈ ವೇಳೆ ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು ಪತ್ರಕರ್ತರ ಆರೋಗ್ಯಕ್ಕಾಗಿ ಠೇವಣಿ ಇರಿಸಿ ಎಂಬ ಮನವಿಗೆ ವೇದಿಕೆಯಲ್ಲಿಯೇ ಸ್ಪಂದಿಸಿ ಸಚಿವ ಪಾಟೀಲ ಠೇವಣಿ ಇರಿಸುವ ಭರವಸೆ ನೀಡಿದರು.
ನಂತರ ಸಂದೇಶ ಮುಂದುವರೆಸಿದ ಸಚಿವ ಪಾಟೀಲರು, ಸ್ವಾತಂತ್ರ್ಯಪೂರ್ವದಲ್ಲಿ, ಸ್ವಾತಂತ್ರ್ಯ ಚಳವಳಿಯಲ್ಲಿ ಹಾಗೂ ಸ್ವಾತಂತ್ರ್ಯ ನಂತರದಲ್ಲಿ ಪತ್ರಿಕೋದ್ಯಮ ನಾಲ್ಕನೇಯ ಸ್ತಂಭವಾಗಿ ಮಹತ್ವದ ಪಾತ್ರ ವಹಿಸುತ್ತಲೇ ಬಂದಿದೆ ಎಂದರು.
ಈಗ ಡಿಜಿಟಿಲ್ ಮಿಡಿಯಾ ಕಾಲ. ಮೊಬೈಲ್ ಪರದೆಯಲ್ಲಿಯೇ ಅಂತಾರಾಷ್ಟ್ರೀಯ ಪತ್ರಿಕೆ, ಟಿವಿ ವೀಕ್ಷಿಸಬಹುದು, ಉಳಿದ ದೇಶಗಳಲ್ಲಿ ಮುದ್ರಣ ಮಾಧ್ಯಮಗಳು ಸಂಪೂರ್ಣ ಕ್ಷೀಣಿಸಿವೆ. ಕೃತಕ ಬುದ್ಧಿಮತ್ತೆ ಪತ್ರಿಕೋದ್ಯಮಕ್ಕೂ ಸಹ ಪರಿಣಾಮ ಬೀರಿದೆ. ಈ ಎಲ್ಲ ಸವಾಲುಗಳನ್ನು ಎದುರಿಸಬೇಕಿದೆ ಎಂದರು.
ಪತ್ರಕರ್ತರಿಗೆ, ರಾಜಕಾರಣಿ, ಪೊಲೀಸರಿಗೆ ರವಿವಾರ ಇಲ್ಲವೇ ಇಲ್ಲ. ಅಷ್ಟೊಂದು ಕಾರ್ಯ ಒತ್ತಡ ಈ ಕ್ಷೇತ್ರಗಳ ಮೇಲಿವೆ ಎಂದರು.
ಡಾ.ಫ.ಗು. ಹಳಕಟ್ಟಿ ಅವರು ಆರಂಭಿಸಿದ ನವ ಕರ್ನಾಟಕ ಪತ್ರಿಕೆ ಕರ್ನಾಟಕ ಏಕೀಕರಣಕ್ಕೆ ಬಹುದೊಡ್ಡ ಕೊಡುಗೆ ನೀಡಿತು. ಆ ಮೂಲಕ ವಿಜಯಪುರ ಜಿಲ್ಲೆ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ ಅನನ್ಯ. ಮೊಹರೆ ಹನುಮಂತರಾಯರು, ವಿ.ಬಿ. ನಾಯಕರು, ಟಿ.ಕೆ. ನಾಯಕರು ಹೀಗೆ ಅನೇಕ ಪತ್ರಕರ್ತರು ಪತ್ರಿಕೋದ್ಯಮಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ವೈಜ್ಞಾನಿಕ, ಸಂಶೋಧನಾತ್ಮಕ ಬರಹಗಳು ಮೂಡಿಬರಲಿ

ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ವೈಜ್ಞಾನಿಕ ಹಾಗೂ ಸಂಶೋಧನಾತ್ಮಕ ಬರವಣಿಗೆಗಳು ಇಲ್ಲದೇ ಇರುವುದರಿಂದ‌ ಸಮಾಜಕ್ಕೆ ಅನೇಕ ರೀತಿಯ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಸಂಶೋಧನಾತ್ಮಕ, ವೈಜ್ಞಾನಿಕ ನೆಲೆಗಟ್ಟಿನ ವಿಚಾರಗಳು ಪ್ರಸಾರಗೊಳ್ಳಬೇಕಿದೆ ಎಂದರು.
ದೃಶ್ಯ ಮಾಧ್ಯಮಗಳಿಗೆ ಬ್ರೇಕಿಂಗ್ ನ್ಯೂಸ್ ಪ್ರಥಮಾದ್ಯತೆಯಾಗಿ ಪ್ರಗತಿ ಎರಡನೇ ಆದ್ಯತೆಯಾಗಿದೆ. ಆದರೆ ಪತ್ರಿಕೆಗಳಿಗೆ ಪ್ರಗತಿ ವಿಷಯವೇ ಅಗ್ರವಾಗಿರುವುದು ಸಂತೋಷದ ಸಂಗತಿ ಎಂದರು.
ಡಾ.ಫ.ಗು. ಹಳಕಟ್ಟಿ, ಮೊಹರೆ ಹನುಮಂತರಾಯರು ಪತ್ರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದರು. ಶಿವನ ಮೂರನೇ ಕಣ್ಣಿನಂತೆ ಪತ್ರಕರ್ತರು ಸಹ ಸಮಾಜದ ನಾಲ್ಕನೇ ಕಣ್ಣು ಇದ್ದಂತೆ. ಸಮಾಜದ ಸಮಸ್ಯೆಗಳ ನಿವಾರಣೆಗಾಗಿ ಪತ್ರಕರ್ತರು ಕಣ್ಣು ತೆರೆಯಬೇಕು ಎಂದರು.
ರಾಜ್ಯ ಸರ್ಕಾರ ಪತ್ರಕರ್ತರ ಹಿತರಕ್ಷಣೆಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ಠೇವಣಿ ಇರಿಸುವ ಕಾರ್ಯಕ್ಕೆ ನಾನು ಕೈ ಜೋಡಿಸುವೆ ಎಂದು 5 ಲಕ್ಷ ರೂ.ಗಳ ಠೇವಣಿ ಇರಿಸುವುದಾಗಿ ಘೋಷಿಸಿದರು.
ಇಬ್ಬರು ಸಚಿವರಿಂದ ವಿಜಯಪುರ ಜಿಲ್ಲಾ ಪತ್ರಕರ್ತರ ಸಂಘಕ್ಕೆ ತಲಾ ಐದು ಲಕ್ಷ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಹಣ ನೀಡುವುದಾಗಿ ಘೋಷಿಸಿದ್ದಾರೆ.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ .ಬಿ ಪಾಟೀಲ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಜಿಲ್ಲೆಯ ಪತ್ರಕರ್ತರಿಗೆ ತಮ್ಮ ವೈಯಕ್ತಿಕವಾಗಿ ತಲಾ 5 ಲಕ್ಷ ಹಣವನ್ನು
ಬ್ಯಾಂಕಿನಲ್ಲಿ ಎಫ್ ಡಿ ಮಾಡಿ ಆ ಹಣದಲ್ಲಿ ಬರುವ ಆದಾಯದಲ್ಲಿ ಜಿಲ್ಲೆಯ ಪತ್ರಕರ್ತರ ಸಮಸ್ಯೆಯನ್ನು ಪರಿಹರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

Share