ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

ಭೂತನಾಳ ಕೆರೆ-ಅರಕೇರಿ ಜಾಕ್‌ವೆಲ್‌ಗಳ ಪರಿಶೀಲನೆ

ಸಪ್ತಸಾಗರ ವಾರ್ತೆ,ವಿಜಯಪುರ, ಅ.17:
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ನೀರು ಪೂರೈಸುವ ಅಗತ್ಯ‌ಕ್ರ‌ಮಕ್ಕೆ ಜಿಲ್ಲಾಧಿಕಾರಿ‌ಡಾ.ಆನಂದ‌.ಕೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ನಗರ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಭೂತನಾಳ ಕೆರೆಗೆ ಭೇಟಿ ನೀಡಿ, ನೀರಿನ ಸಂಗ್ರಹದ ಪ್ರಮಾಣ, ಲಭ್ಯತೆ ಹಾಗೂ ನಗರಕ್ಕೆ ಪೂರೈಸುವ ಸಾಮರ್ಥ್ಯವನ್ನು ಪರಿಶೀಲಿಸಿದರು.
ನಂತರ ಅರಕೇರಿಯ ಜಾಕ್‌ವೆಲ್‌ ಭೇಟಿ ನೀಡಿ, ಪಂಪ್‌ಗಳ ಕಾರ್ಯನಿರ್ವಹಣೆ, ನೀರು ಎತ್ತುವ ಸಾಮರ್ಥ್ಯ ಮತ್ತು ಸರಬರಾಜು ವ್ಯವಸ್ಥೆಯ ಸ್ಥಿತಿಗತಿಗಳನ್ನು ಅವಲೋಕಿಸಿದರು. ತಾಂತ್ರಿಕ ದೋಷಗಳು ಕಂಡುಬಂದಲ್ಲಿ ತಕ್ಷಣ ದುರಸ್ತಿ ಕೈಗೊಂಡು, ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮವಹಿಸಲು ಸೂಚಿಸಿದರು.
ನಗರದ ಎಲ್ಲ ಪ್ರದೇಶಗಳಿಗೂ ಸಮರ್ಪಕವಾಗಿ ನೀರು ತಲುಪುವಂತೆ ವಿತರಣಾ ವ್ಯವಸ್ಥೆಯನ್ನು ನಿರ್ವಹಿಸುವುದು, ಸೋರಿಕೆ ತಡೆಗಟ್ಟುವುದು ಹಾಗೂ ಲಭ್ಯವಿರುವ ನೀರನ್ನು ಪರಿಣಾಮಕಾರಿಯಾಗಿ ಬಳಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಾರ್ವಜನಿಕರು ನೀರನ್ನು ಮಿತವಾಗಿ ಬಳಸುವ ಮೂಲಕ ನೀರಿನ ವ್ಯರ್ಥ ತಡೆಗಟ್ಟಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪರಿಶೀಲನೆ ಸಂದರ್ಭದಲ್ಲಿ ಮಹಾನಗರ ಪಾಲಿಕೆ, ನಗರ ನೀರು ಸರಬರಾಜು ಇಲಾಖೆ ಹಾಗೂ ಸಂಬಂಧಪಟ್ಟ ತಾಂತ್ರಿಕ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share this