ಸಪ್ತಸಾಗರ ವಾರ್ತೆ, ವಿಜಯಪುರ, ಆ. 26:
ಮಳೆಯಿಂದ ಹಾನಿಗೊಳಗಾದ ಬೆಳೆ ಹಾನಿಯ ಜಂಟಿ ಸಮೀಕ್ಷೆ ಈಗಾಗಲೇ ಕೈಗೊಳ್ಳಲಾಗಿದ್ದು, ಎರಡು ದಿನಗಳಲ್ಲಿ ಬೆಳೆ ಹಾನಿಯ ಬಗ್ಗೆ ಪೂರ್ಣ ಪ್ರಮಾಣದ ಸಮಗ್ರ ಸಮೀಕ್ಷೆ ವರದಿಯನ್ನು ಸಲ್ಲಿಸುವಂತೆಯೂ. ಈ ಸಮೀಕ್ಷೆಯಲ್ಲಿ ಯಾವೊಬ್ಬ ಅರ್ಹ ರೈತರು ಹೊರ ಉಳಿಯದಂತೆ ಕಾಳಜಿವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕುರಿತ ಸಭೆ ನಡೆಸಿ, ಮಾತನಾಡಿದ ಅವರು, ಬೆಳೆ ಹಾನಿ ರೈತರ ಪಟ್ಟಿ ಸಿದ್ದಪಡಿಸಿ, ಪಟ್ಟಿಯನ್ನು ರೈತರ ಅವಗಾಹನೆಗಾಗಿ ಆಯಾ ಗ್ರಾಮ ಪಂಚಾಯತಿಯ ಸೂಚನಾ ಫಲಕದಲ್ಲಿ ಪಟ್ಟಿಯನ್ನು ಪ್ರಚುರ ಪಡೆಸಬೇಕು. ಬೆಳೆ ಹಾನಿ ಪಟ್ಟಿ ಪ್ರಕಟ್ಟಿಸಿದ 7 ದಿನದೊಳಗೆ ಆಕ್ಷೇಪಣೆ ಸಲ್ಲಿಸಲು ರೈತರಿಗೆ ಕಾಲಾವಕಾಶ ಕಲ್ಪಿಸಿ, ರೈತರು ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮವಾಗಿ ಸಮಗ್ರ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನೆಹಾನಿ ಪ್ರಕರಣಗಳಲ್ಲಿ ಯಾವುದೇ ಬಾಕಿ ಉಳಿಸಿಕೊಳ್ಳದೇ 72 ಗಂಟೆಗಳಲ್ಲಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದೂ, ಎದುರಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ದೃಷ್ಟಿಯಿಂದ ಮುನ್ನೆಚ್ಚರಿಕೆಯಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ಮಳೆ ಬರುವ ಸೂಚನೆಯಿದ್ದಾಗ ಅಪಾಯದ ಮುನ್ಸೂಚನೆಯ ಬಗ್ಗೆ ನದಿ, ಹಳ್ಳ-ಕೊಳ್ಳಗಳಿರುವ ಸ್ಥಳಗಳಲ್ಲಿ ನಿಗಾ ವಹಿಸಲು ಕ್ರಮ ಕೈಗೊಳ್ಳುವುದು. ಅಪಾಯ ಮುನ್ಸೂಚನೆಯ ಸೂಚನಾ ಫಲಕಗಳನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಅಳವಡಿಸಬೇಕು.
ಜಿಲ್ಲೆಯಲ್ಲಿ ಎದುರಾಗಬಹುದಾದ ಪ್ರಕೃತಿ ವಿಕೋಪ ನಿಯಂತ್ರಣ ಕ್ರಮ ಕೈಕೊಳ್ಳುವುವದಕ್ಕಾಗಿ ಆಗಾಗ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಜರುಗಿಸಲಾಗಿದೆ. ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ವಿಪತ್ತು ನಿರ್ವಹಣಾ ಸಮಿತಿ ಮೂಲಕ ವಿಪತ್ತು ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಬೇಕು ಎಂದು ಸೂಚನೆ ನೀಡಿದರು.
ತಾಲ್ಲೂಕ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನೋಡಲ್ ಅಧಿಕಾರಿಗಳು ನಿಯೋಜಿಸಿದ ತಾಲೂಕಿಗೆ ಆಗಾಗ ಭೇಟಿ ನೀಡಿ, ಅತಿವೃಷ್ಟಿಯಿಂದ ಉಂಟಾಗಬಹುದಾದ ಸ್ಥಳಗಳ ಮಾಹಿತಿಯನ್ನು ಪಡೆದು ಪ್ರತಿ 15 ದಿನಗಳಿಗೊಮ್ಮೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತು ಸಭೆ ನಡೆಸಬೇಕು ಹಾಗೂ ತಾಲೂಕು ಕೇಂದ್ರದಲ್ಲಿ 24/7 ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ಸೂಚನೆ ನೀಡಿದ ಅವರು, ಸಾರ್ವಜನಿಕರ ತುರ್ತಾಗಿ ಸಂಪರ್ಕಿಸಲು ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ಸಂಖ್ಯೆ 1077 ಅಥವಾ ವಿಪತ್ತು ನಿರ್ವಹಣಾ ಪರಿಣಿತರ ಸಂಖ್ಯೆ 7019682740 ಗೆ ಸಂಪರ್ಕಿಸಬಹುದಾಗಿದೆ.
ರಕ್ಷಣಾ ಸಾಮಗ್ರಿಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದರೊಂದಿಗೆ ಈಜುಗಾರರು, ಹಾವಾಡಿಗರು, ಸ್ವಯಂ ಸೇವಕ ಸಂಘಗಳ ಮಾಹಿತಿಯನ್ನು ಸನ್ನದ್ಧವಾಗಿಟ್ಟುಕೊಳ್ಳಬೇಕು. ಎಂದು ಅವರು ಸೂಚನೆ ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ರಿಷಿ ಆನಂದ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬದ್ರುದ್ದಿನ್ ಸೌದಾಗರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ರಾಹುಲ್ ಬಾವಿದೊಡ್ಡಿ ಸೇರಿದಂತೆ ತಾಲೂಕಾ ನೂಡಲ್ ಅಧಿಕಾರಿಗಳು ಹಾಗೂ ತಾಲೂಕಿನ ತಹಶೀಲ್ದಾರರು ಉಪಸ್ಥಿತರಿದ್ದರು.
ಬೆಳೆಹಾನಿ ಸಮೀಕ್ಷೆಯಲ್ಲಿ ಅರ್ಹ ರೈತರು ಬಿಟ್ಟುಹೋಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ
