ಧರ್ಮಸ್ಥಳ ವಿವಾದ :ಹಿಂದೂಗಳ ಭಾವನೆ ಕೆರಳಿಸುವ ಕೆಲಸ: ಬಸನಗೌಡ ಟೀಕೆ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 29 :
ಸುಕ್ಷೇತ್ರ ಧರ್ಮಸ್ಥಳ ವಿಷಯದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಿ ಹಿಂದೂಗಳ ಭಾವನೆಯನ್ನು ಕಾಂಗ್ರೆಸ್ ಸರ್ಕಾರ ಕೆರಳಿಸುವ ಕೆಲಸ ಮಾಡಿದೆ. ಇದೊಂದು ಅನೈತಿಕ ಸರ್ಕಾರ. ಈ ಸರ್ಕಾರ ಕಿತ್ತೊಗೆಯಲು ಜನರಲ್ಲಿ ಜಾಗೃತಿ ಮೂಡಿಸಲು ಸಂಘಟಿತ ಹೋರಾಟ ನಡೆಸಲಾಗುವುದು. ಸುಕ್ಷೇತ್ರ ಧರ್ಮಸ್ಥಳ ವಿಷಯದಲ್ಲಿ ಕೈ ಹಾಕಿರುವ ಕಾಂಗ್ರೆಸ್ ಉಳಿಗಾಲ ಇಲ್ಲ ಎಂದು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ (ತುಂಬಗಿ) ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯ ಹಾಗೂ ಭಕ್ತಿ ಸ್ಥಳದ ಮೇಲೆ ರಾಜಕಾರಣ ಸಲ್ಲ. ಜೆಡಿಎಸ್ ಹಿನ್ನೆಲೆಯಲ್ಲಿ ಬಂದ ಮುಖ್ಯಮಂತ್ರಿಗಳು ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಿರುವುದು ಖಂಡನೀಯ ಎಂದರು.
ಸುಕ್ಷೇತ್ರ ಧರ್ಮಸ್ಥಳ ಒಂದು ಪವಿತ್ರ ಕ್ಷೇತ್ರ, ಬಡವರಿಗೆ ಮನೆ, ಬಡ ಮಹಿಳೆಯರಿಗೆ ಆರ್ಥಿಕ ಚೈತನ್ಯ ತುಂಬುವ ಪವಿತ್ರ ಸಮಾಜ ಕಾರ್ಯ ಮಾಡುತ್ತಾ ಬಂದಿರುವ ಧರ್ಮಸ್ಥಳ ಒಂದು ಪವಿತ್ರ ಧಾರ್ಮಿಕ ಸ್ಥಳ, ಈ ಪವಿತ್ರ ಧರ್ಮಸ್ಥಳದ ಮೇಲೆ ಆರೋಪ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಅಳಿಗಾಲ ಆರಂಭವಾಗಿದೆ ಎಂದರು.
ಧರ್ಮಸ್ಥಳದಲ್ಲಿ ಸಾಮೂಹಿಕ ಹತ್ಯೆ, ಆರ್ಥಿಕ ಅವ್ಯಹಾರ ಬಗ್ಗೆ ಇಲ್ಲ ಸಲ್ಲದ ಆರೋಪ ನಿರಾಧಾರ. ಯಾವ ಆರೋಪವೂ ಸಾಬೀತಾಗಿಲ್ಲ. ಎಸ್.ಐ.ಟಿ. ತನಿಖೆ, ಕಾರ್ಯಾಚರಣೆ ನಡೆದಾಗ ಒಂದೇ ಒಂದು ಮೂಳೆ ಪತ್ತೆಯಾಗಿಲ್ಲ ಎಂದರು. ಒಂದು ಧರ್ಮದ ಓಲೈಕೆಗಾಗಿ ರಾಜ್ಯ ಸರ್ಕಾರ ಧರ್ಮಸ್ಥಳಕ್ಕೆ ಕಳಂಕ ಬರುವ ನಿಟ್ಟಿನಲ್ಲಿ ಸರ್ಕಾರ ನಡೆದುಕೊಂಡಿದೆ ಎಂದರು.
ಸಿಬಿಐಗೆ ತನಿಖೆ ವಹಿಸಬಹುದಾಗಿತ್ತು, ಆದರೆ ಕಾಂಗ್ರೆಸ್ ಸರ್ಕಾರ ಪಿತೂರಿ ನಡೆಸಿ ಒಂದು ತಿಂಗಳ ಕಾಲ ಅಲ್ಲಿ ಒಂದು ರೀತಿ ತೊಂದರೆ ನೀಡುವ ಕಾರ್ಯದ ಉದ್ದೇಶವೇನು? ಎಂದು ಪ್ರಶ್ನಿಸಿದರು.
ಈ ರಾಜ್ಯ ಸರ್ಕಾರ ನಡೆ ಖಂಡಿಸಿ ಬೃಹತ್ ಹೋರಾಟ ನಡೆಯಲಿದ್ದು, ಧರ್ಮಸ್ಥಳ ಚಲೋ ಪಾದಯಾತ್ರೆ ನಡೆಸಲಾಗುವುದು. ವಿಜಯಪುರ ಜಿಲ್ಲೆಯಿಂದಲೂ ನೂರಾರು ಕಾರ್ಯಕರ್ತರು ಹಾಸನ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈ ಎಲ್ಲ ವಿದ್ಯಮಾನಗಳಿಂದ ರಾಜ್ಯ ಸಭಾ ಸದಸ್ಯ ವಿರೇಂದ್ರ ಹೆಗ್ಗಡೆ ಅವರ ರಾಜಿನಾಮೆಗೆ ಏಕೆ ಒತ್ತಾಯಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಡಾ ಹಗರಣ ಬಂದಾಗ ಸಿ.ಎಂ. ಸಿದ್ದರಾಮಯ್ಯ ಅವರು ರಾಜಿನಾಮೆ ಏಕೆ ನೀಡಲಿಲ್ಲ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಪಾತ್ರ ಎಳ್ಳಷ್ಟೂ ಇಲ್ಲ, ಅವರು ರಾಜಿನಾಮೆ ಕೊಡುವ ಪ್ರಶ್ನೆ ಇಲ್ಲ, ಅವರು ರಾಜಕಾರಣಿ ಅಲ್ಲ, ತನಿಖೆಯನ್ನು ಅವರು ಸ್ವಾಗತಿಸಿದ್ದಾರೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ ಮನಗೂಳಿ ಮಾತನಾಡಿ, ಧರ್ಮಾಧಿಕಾರಿಗಳು ಯಾವ ತಪ್ಪೇ ಮಾಡಿಲ್ಲ, ಹೀಗಾಗಿ ಅವರು ಹೇಳಿಕೆ ನೀಡುವ ಪ್ರಶ್ನೆ ಬರುವುದಿಲ್ಲ ಎಂದರು.
ಮುಖಂಡರಾದ ರಾಜು ಹಿಪ್ಪರಗಿ, ಪೀರಪಾಶಾ ಗಚ್ಚಿನಮಹಲ, ಸುಭಾಷ ರಾಠೋಡ, ನಿಂಗನಗೌಡ ಸೊಲ್ಲಾಪೂರ, ಸಂಜೀವ ಹಿರೇಮಠ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share