ಸಚಿವ ಸ್ಥಾನ ಕೈತಪ್ಪಿದ ಬೇಸರ; ಜನರ ಒತ್ತಾಯಕ್ಕೆ ಮಣಿದು ರಾಜೀನಾಮೆ ವಾಪಸ್: ಯಶವಂತರಾಯಗೌಡ ಪಾಟೀಲ್

ಸಪ್ತಸಾಗರ ವಾರ್ತೆ,ವಿಜಯಪುರ, ಆ.6: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್, ಬೆಂಬಲಿಗರು, ಹಿತೈಷಿಗಳು ಹಾಗೂ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಸ್ಪಷ್ಟಪಡಿಸಿದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಜನರು ಬಹುಮತ ನೀಡಿದ್ದರು. ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಉತ್ತಮ ಆಡಳಿತ ನೀಡಿದೆ. ಆದರೆ ಸಚಿವ ಸಂಪುಟ ವಿಸ್ತರಣೆಯ ವೇಳೆ ನನಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಲಿಲ್ಲ. ಅದರಿಂದ ಬೇಸರಗೊಂಡು ರಾಜೀನಾಮೆ ನೀಡಿದ್ದೆ,” ಎಂದು ಹೇಳಿದರು.
ಸ್ವಾತಂತ್ರ್ಯಾನಂತರ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಸರ್ಕಾರ ರಚನೆಯ ವೇಳೆ ನಡೆದ ಮಾತುಕತೆಯಂತೆ ಎರಡನೇ ಹಂತದ ಸಚಿವ ಸಂಪುಟದಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಕೊನೆಯ ಕ್ಷಣದವರೆಗೂ ಭರವಸೆ ನೀಡಿದರೂ ಸಚಿವ ಸ್ಥಾನ ದೊರೆಯಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ತಮ್ಮ ನಿವಾಸಕ್ಕೆ ಬಂದು ಸುದೀರ್ಘವಾಗಿ ಮಾತುಕತೆ ನಡೆಸಿದರು.
ಹಲವಾರು ಶಾಸಕರು, ಸ್ವಾಮೀಜಿಗಳು ಹಾಗೂ ಬೆಂಬಲಿಗರು ರಾಜೀನಾಮೆ ವಾಪಸ್ ಪಡೆಯುವಂತೆ ಮನವಿ ಮಾಡಿದರು. ಅವರ ಭಾವನೆಗಳಿಗೆ ಗೌರವ ನೀಡಿ ನಿರ್ಧಾರ ಬದಲಿಸಿದ್ದೇನೆ ಎಂದರು.

“ಈಗ ಪೋಸ್ಟ್‌ಮಾರ್ಟಂ ಬೇಡ“

ಸಚಿವ ಸ್ಥಾನ ತಪ್ಪಿಸಲು ಷಡ್ಯಂತ್ರ ನಡೆದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಯಾವುದೇ ಭರವಸೆಗಳನ್ನು ಈಗ ನಂಬುವುದಿಲ್ಲ. ಹಿಂದೆ ಕೆಲವು ವಿಚಾರಗಳನ್ನು ಹೇಳಿದ್ದೆ. ಈಗ ಏನೂ ಮಾತನಾಡುವುದಿಲ್ಲ. ಜನರ ಭಾವನೆಗಳಿಗೆ ತಲೆಬಾಗಿದ್ದೇನೆ. ಇದು ಮುಗಿದ ಅಧ್ಯಾಯ. ಈಗ ಪೋಸ್ಟ್‌ಮಾರ್ಟಂ ಮಾಡುವ ಅಗತ್ಯವಿಲ್ಲ,” ಎಂದು ಹೇಳಿದರು.

ಎಂ.ಬಿ. ಪಾಟೀಲ್ ವಿರುದ್ಧದ ಆರೋಪಕ್ಕೆ ಮೌನ

ಸಚಿವ ಸ್ಥಾನ ತಪ್ಪಿಸಲು ಸಚಿವ ಎಂ.ಬಿ. ಪಾಟೀಲ್ ಷಡ್ಯಂತ್ರ ನಡೆಸಿದ್ದಾರೆ ಎಂಬ ಆರೋಪದ ಕುರಿತು ಪ್ರಶ್ನಿಸಿದಾಗ, “ಅದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಈಗ ಯಾವುದೇ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ಪಕ್ಷದ ವರಿಷ್ಠರು ಕೂಲಾಗಿರಲು ಸೂಚಿಸಿದ್ದಾರೆ. ಅದನ್ನು ಪಾಲಿಸುತ್ತಿದ್ದೇನೆ,” ಎಂದು ಹೇಳಿದರು.

ಯತ್ನಾಳ ವಿರುದ್ಧ ತಿರುಗೇಟು

ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಯಶವಂತರಾಯಗೌಡ ಪಾಟೀಲ್, “ಯತ್ನಾಳ ಒಬ್ಬ ಜನಪ್ರತಿನಿಧಿ. ಅವರು ಈ ರೀತಿಯ ಭಾಷೆ ಬಳಸಬಾರದು. ಹೀಗೆ ಮಾತನಾಡುತ್ತಾ ಬಂದದ್ದರಿಂದಲೇ ಅವರು ಪಕ್ಷದಿಂದ ಹೊರಗಾಗಿದ್ದಾರೆ. ನಾನು ಯಾರಿಗೂ ತಲೆಬಾಗುವುದಿಲ್ಲ; ಜನರಿಗೆ ಮಾತ್ರ ತಲೆಬಾಗುತ್ತೇನೆ. ಯತ್ನಾಳರಂತಹ ಹತ್ತು ಜನರನ್ನು ನೋಡಿದ್ದೇನೆ, ಮುಂದೆಯೂ ನೋಡುತ್ತೇನೆ,” ಎಂದು ಹೇಳಿದರು.
ತಮ್ಮ ಕಾಂಗ್ರೆಸ್ ನಿಷ್ಠೆ ಪ್ರಶ್ನಿಸಿದ ಯತ್ನಾಳ ಹೇಳಿಕೆಗೆ ಉತ್ತರಿಸಿದ ಅವರು, “ಯಾರು ಪಕ್ಷ ಬಿಟ್ಟು ಹೋಗಿದ್ದಾರೆ, ಯಾರು ಮತ್ತೆ ಪಕ್ಷಕ್ಕೆ ಬಂದಿದ್ದಾರೆ, ಎಲ್ಲರ ರಾಜಕೀಯ ಇತಿಹಾಸ ಜನರಿಗೆ ಗೊತ್ತಿದೆ. ಅಂತಹವರಿಂದ ನಾನು ಪಾಠ ಕಲಿಯಬೇಕಾದ ಅಗತ್ಯವಿಲ್ಲ,” ಎಂದು ವಾಗ್ದಾಳಿ ನಡೆಸಿದರು.

ನಿಗಮ–ಮಂಡಳಿ ಸ್ಥಾನ ಬೇಡ

ತಮಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ, “ಹಿಂದೆಯೂ ನಿಗಮ-ಮಂಡಳಿ ಅಧ್ಯಕ್ಷನಾಗಿರಲಿಲ್ಲ, ಈಗಲೂ ಆಗುವುದಿಲ್ಲ. ಯಾವುದೇ ಹುದ್ದೆಗೆ ನಾನು ಬೇಡಿಕೆ ಇಟ್ಟಿಲ್ಲ,” ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿ, “ಕಾಂಗ್ರೆಸ್ ಮನೆ ಒಂದೇ, ಬಾಗಿಲೂ ಒಂದೇ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಸಚಿವ ಸ್ಥಾನ ಪಡೆದವರು ಉತ್ತಮವಾಗಿ ಕೆಲಸ ಮಾಡಲಿ,” ಎಂದು ಹೇಳಿದರು.
ಸಚಿವ ಸ್ಥಾನ ತಪ್ಪಿಸಿದವರ ಕುರಿತು ಪ್ರಶ್ನಿಸಿದಾಗ, “ಸದ್ಯ ನಾನು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ಮುಂದಿನ ಚುನಾವಣೆಯ ಸಂದರ್ಭದಲ್ಲಿ ಕೆಲವು ವಿಚಾರಗಳನ್ನು ಬಹಿರಂಗಪಡಿಸುತ್ತೇನೆ,” ಎಂದು ಮಾರ್ಮಿಕವಾಗಿ ಹೇಳಿದರು.

Share this