ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 2: ಕೇಂದ್ರ ಬಜೆಟ್ ಎಲ್ಲ ವರ್ಗದವರಿಗೆ ನಿರಾಶದಾಯಕ ಬಜೆಟ್ ಆಗಿದೆ ಎಂದು ಕಾಂಗ್ರೆಸ್ ವೈದ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ರವಿಕುಮಾರ ಬಿರಾದಾರ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ದೇಶದ ರೈತರು, ಯುವಜನತೆ ಮತ್ತು ಮಧ್ಯಮ ವರ್ಗದ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದು, ಕಠಿಣ ಆರ್ಥಿಕ ವಾಸ್ತವಗಳನ್ನು ಎದುರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದ್ದರೂ ಮತ್ತು ಉತ್ಪಾದನಾ ವಲಯವು ಕುಸಿತದ ಹಾದಿಯಲ್ಲಿದ್ದರೂ, ಸರ್ಕಾರವು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಬದಲು ಕೇವಲ ಆಕರ್ಷಕ ಘೋಷಣೆಗಳಿಗೆ ಸೀಮಿತವಾಗಿದೆ. ಗೃಹ ಉಳಿತಾಯದ ಪ್ರಮಾಣ ಕುಸಿಯುತ್ತಿರುವುದು ಮತ್ತು ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಎದುರಾಗಿರುವ ಇಂದಿನ ಸಂದರ್ಭದಲ್ಲಿ, ಬಜೆಟ್ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ಕೇವಲ ಅಂಕಿ-ಅಂಶಗಳ ಆಟವಾಗಿ ಪರಿಣಮಿಸಿದೆ ಎಂದು ಅವರು ಹೇಳಿದ್ದಾರೆ.
ದೇಶದ ಬೊಕ್ಕಸಕ್ಕೆ ಅತಿ ಹೆಚ್ಚು ತೆರಿಗೆ ಆದಾಯ ಹರಿಸುವ ಕರ್ನಾಟಕವನ್ನು ಈ ಬಾರಿಯೂ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸುವ ಮೂಲಕ ರಾಜ್ಯಕ್ಕೆ ಅನ್ಯಾಯ ಎಸಗಿದೆ ಎಂದಿದ್ದಾರೆ.
ವಿಶೇಷವಾಗಿ, ನೆರೆಯ ರಾಜ್ಯಗಳಿಗೆ ಬೃಹತ್ ಕೈಗಾರಿಕಾ ಕಾರಿಡಾರ್‌ಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರ, ಕರ್ನಾಟಕದ ಆರ್ಥಿಕ ಪ್ರಗತಿಗೆ ಪೂರಕವಾಗಬಲ್ಲ ಯಾವುದೇ ಹೊಸ ಕಾರಿಡಾರ್‌ಗಳನ್ನು ನೀಡದೆ ಮಲತಾಯಿ ಧೋರಣೆ ತಳೆದಿದೆ. ರಾಜ್ಯದ ಅಭಿವೃದ್ಧಿಗೆ ಅಗತ್ಯವಾದ ಪ್ರಮುಖ ಮೂಲಸೌಕರ್ಯ ಯೋಜನೆಗಳು ಅಥವಾ ಕೈಗಾರಿಕಾ ಸಂಪರ್ಕ ಕ್ರಾಂತಿಗೆ ಯಾವುದೇ ವಿಶೇಷ ಅನುದಾನಗಳನ್ನು ಮೀಸಲಿಡದಿರುವುದು ಕನ್ನಡಿಗರ ನಿಷ್ಠಾವಂತ ತೆರಿಗೆ ಪಾವತಿಗೆ ಸಂದ ಅವಮಾನದಂತಿದೆ ಎಂದು ತಿಳಿಸಿದ್ದಾರೆ.
ಒಕ್ಕೂಟ ವ್ಯವಸ್ಥೆಯಲ್ಲಿ ಸಮಾನ ಆದ್ಯತೆ ನೀಡುವ ಬದಲು, ಕೇವಲ ರಾಜಕೀಯ ಲಾಭದ ದೃಷ್ಟಿಯಿಂದ ಕೆಲವು ಆಯ್ದ ರಾಜ್ಯಗಳಿಗೆ ಮಾತ್ರ ವಿಶೇಷ ಮಣೆ ಹಾಕಲಾಗಿದ್ದು, ಇದು ಅಭಿವೃದ್ಧಿಪರ ನೀತಿಯ ಬದಲಾಗಿ ಕೇವಲ ರಾಜಕೀಯ ಅಜೆಂಡಾವನ್ನು ಪ್ರತಿಬಿಂಬಿಸುತ್ತಿದೆ ಎಂದು ತಿಳಿಸಿದ್ದಾರೆ.
ಯುವ ಜನತೆಯ ಉದ್ಯೋಗ ಸೃಷ್ಟಿಯ ಬಗ್ಗೆ ಪ್ರತಿ ವರ್ಷದಂತೆ ಈ ಬಾರಿಯೂ ಹಳೆಯ ಭರವಸೆಗಳನ್ನೇ ಪುನರಾವರ್ತಿಸಲಾಗಿದೆಯೇ ಹೊರತು, ವಾಸ್ತವದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯಾವುದೇ ದೃಢವಾದ ಕ್ರಿಯಾ ಯೋಜನೆ ರೂಪಿಸಿಲ್ಲ. ಕಾರಿಡಾರ್‌ಗಳಂತಹ ಬೃಹತ್ ಯೋಜನೆಗಳು ರಾಜ್ಯಕ್ಕೆ ಸಿಗದಿರುವುದರಿಂದ ಹೊಸ ಉದ್ಯೋಗ ಸೃಷ್ಟಿಯ ಆಸೆಗಳಿಗೂ ತಣ್ಣೀರು ಎರಚಿದಂತಾಗಿದೆ ಎಂದು ಹೇಳಿದ್ದಾರೆ.
ಈ ಬಜೆಟ್ ಬೆಲೆ ಏರಿಕೆ ಮತ್ತು ಸಾಲದ ಹೊರೆಯಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ಯಾವುದೇ ಸಮಾಧಾನ ತಂದಿಲ್ಲ. ಕಾರ್ಪೊರೇಟ್ ವಲಯದ ಹಿತಾಸಕ್ತಿಯನ್ನು ಎತ್ತಿ ಹಿಡಿಯುವ ಸರ್ಕಾರಕ್ಕೆ ರೈತರು ಮತ್ತು ಶ್ರಮಿಕ ವರ್ಗದ ಕಷ್ಟಗಳು ಕಾಣಿಸುತ್ತಿಲ್ಲ. ಕರ್ನಾಟಕ ವಿರೋಧಿ ಮತ್ತು ಜನವಿರೋಧಿ ಧೋರಣೆಯ ಈ ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.
ದೇಶದ ಆರ್ಥಿಕ ಸಂಕಷ್ಟಗಳಿಗೆ ಪರಿಹಾರ ನೀಡುವ ಬದಲು ಕೇವಲ ರಾಜಕೀಯ ಪ್ರಚಾರದ ದಸ್ತಾವೇಜಾಗಿ ಉಳಿದಿದೆ ಎಂದು ಡಾ. ಬಿರಾದಾರ ಹೇಳಿದ್ದಾರೆ.
ನಿರಾಶಾದಾಯಕ ಬಜೆಟ್:ಡಾ. ಬಿರಾದಾರ


