ಸಪ್ತಸಾಗರ ವಾರ್ತೆ ವಿಜಯಪುರ, ಅ. 5: ವಿಜಯಪುರದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಬಿಎಲ್ಡಿಇಎ ಸಂಸ್ಥೆಯ ವಿ.ಪಿ. ಡಾ. ಪಿ.ಜಿ. ಹಳಕಟ್ಟಿ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದ ವಿದ್ಯಾರ್ಥಿಗಳು ‘ಡಿಸ್ಕವರ್ ವಿಜಯಪುರ’ (Discover Vijayapura) ಎಂಬ ಸ್ಮಾರ್ಟ್ ಪ್ರವಾಸೋದ್ಯಮ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.
ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಸೆ.27ರಂದು ನಗರದ ಐತಿಹಾಸಿಕ ಇಬ್ರಾಹಿಂ ರೋಜಾದಲ್ಲಿ ಆ್ಯಪ್ ಬಿಡುಗಡೆ ಮಾಡಲಾಯಿತು.
ಆ್ಯಪ್ನಲ್ಲಿ ವಿಜಯಪುರದ ಪ್ರಸಿದ್ಧ ಹಾಗೂ ಕಡಿಮೆ ಪರಿಚಿತ ಐತಿಹಾಸಿಕ ಸ್ಮಾರಕಗಳ ಮಾಹಿತಿ, ಪ್ರವಾಸ ಯೋಜನೆ, ವಸತಿ ಸೌಲಭ್ಯಗಳು, ಸ್ಥಳೀಯ ಆಹಾರ, ಪರಿಶೀಲಿತ ಪ್ರವಾಸಿ ಮಾರ್ಗದರ್ಶಕರು ಹಾಗೂ ಸಾಂಪ್ರದಾಯಿಕ ಟಾಂಗಾ ಸವಾರಿ ಸೇರಿದಂತೆ ಪ್ರವಾಸಿಗರಿಗೆ ಅಗತ್ಯವಾದ ವಿವಿಧ ಮಾಹಿತಿಗಳನ್ನು ಒದಗಿಸಲಾಗಿದೆ. ಇದರಿಂದ ಪ್ರವಾಸಿಗರು ತಮ್ಮ ಪ್ರವಾಸವನ್ನು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಯೋಜಿಸಿಕೊಳ್ಳಲು ನೆರವಾಗಲಿದೆ.
ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥೆ ಡಾ. ಸುಮಂಗಲಾ ಬಿರಾದಾರ್ ಅವರು ‘ಡಿಜಿಟಲ್ ಅಜೆಂಡಾ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಪ್ರವಾಸೋದ್ಯಮದ ಮರು ವಿನ್ಯಾಸ’ ವಿಷಯದ ಕುರಿತು ಅತಿಥಿ ಉಪನ್ಯಾಸ ನೀಡಿದರು. ಪ್ರವಾಸೋದ್ಯಮದಲ್ಲಿ ಡಿಜಿಟಲ್ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಪ್ರವಾಸಿಗರ ಅನುಭವವನ್ನು ಸುಧಾರಿಸುವುದರ ಜತೆಗೆ ವಿಜಯಪುರದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಸಾಧ್ಯವಿದೆ ಎಂದು ಅವರು ವಿವರಿಸಿದರು.
ದತ್ತಾ ಕಾಂಬಾಗಿ, ಯಾರಿಸ್ ನದಾಫ್, ಈಶ್ವರ ಶಟಗಾರ ಹಾಗೂ ದರ್ಶನ್ ವಾಲಿ ಅವರು ಆ್ಯಪ್ ಅಭಿವೃದ್ಧಿಪಡಿಸಿದ್ದು, ಡಾ. ಸುಮಂಗಲಾ ಬಿರಾದಾರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಪ್ರಾಂಶುಪಾಲ ಡಾ. ಮಂಜುನಾಥ ಪಿ. ಅವರ ಸಹಕಾರದೊಂದಿಗೆ ರೂಪಿಸಲಾಗಿದೆ.
ತಂತ್ರಜ್ಞಾನವನ್ನು ಪ್ರವಾಸೋದ್ಯಮದೊಂದಿಗೆ ಸಂಯೋಜಿಸಿ ವಿಜಯಪುರದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ವೈಭವವನ್ನು ದೇಶ-ವಿದೇಶದ ಪ್ರವಾಸಿಗರಿಗೆ ತಲುಪಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಬಿಎಲ್ಡಿಇ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ. ಮಂಜುನಾಥ ಪಿ., ಉಪಪ್ರಾಂಶುಪಾಲರಾದ ಡಾ. ಲೀನಾ ರಾಘಾ ಹಾಗೂ ಡಾ. ಪಿ.ವಿ. ಮಾಳಜಿ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯಪುರದ ಪ್ರವಾಸಿ ತಾಣಗಳ ಪರಿಚಯಕ್ಕೆ ‘ಡಿಸ್ಕವರ್ ವಿಜಯಪುರ’ ಆ್ಯಪ್


