ಸಪ್ತಸಾಗರ ವಾರ್ತೆ, ವಿಜಯಪುರ, ಅ. 9:
ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಎಂಟು ದಿನಗಳ ಕಾಲ ನಡೆದ ವಿಶ್ವ ಯುವ ಶೃಂಗ ಸಭೆಯಲ್ಲಿ ಭಾರತ ದೇಶದಿಂದ ಏಕೈಕ ಯುವ ಪ್ರತಿನಿಧಿಯಾಗಿ ಭಾಗವಹಿಸಿ ವಿಶ್ವ ಶಾಂತಿಯ ಸಂದೇಶ ಸಾರಿದ ವಿಜಯಪುರದ ಹೆಮ್ಮೆಯ ಕುಮಾರಿ ಶಿಫಾ ಜಮಾದಾರ ಅವರಿಗೆ ವಿಜಯಪುರ ಜಿಲ್ಲಾಧಿಕಾರಿ ಡಾ.ಕೆ. ಆನಂದ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೃದಯಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ. ಆನಂದ, ವಿಜಯಪುರದಲ್ಲಿ ಅನೇಕ ದಿನಗಳಿಂದಲೂ ತಮ್ಮ ಸಾಮಾಜಿಕ ಸೇವೆಗಳ ಮೂಲಕ ಹೆಸರು ಮಾಡಿದ್ದ ಶಿಫಾ ಅವರು ಯುವತಿಯರ ಆರೋಗ್ಯ, ಸ್ವಚ್ಚತೆ ಜಾಗೃತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಈಗ ರಷ್ಯಾದಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಶಾಂತಿಯ ವಿಷಯವಾಗಿ, ಭಾರತೀಯ ಸಂಸ್ಕೃತಿಯ ಬೆಳಕಿನಲ್ಲಿ ವಿಶ್ವಶಾಂತಿಯ ಸಂದೇಶವನ್ನು ನೀಡುವ ಮೂಲಕ ವಿಜಯಪುರದ ಕೀರ್ತಿ ಹೆಚ್ಚಿಸಿರುವುದು ಸಂತೋಷ ತರಿಸಿದೆ ಎಂದರು.
ಜಿಲ್ಲಾ ಪಂಚಾಯತ ಸಿಇಓ ರಿಷಿ ಆನಂದ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅತ್ಯಾಧುನಿಕ ಎ-ಐ ತಂತ್ರಜ್ಞಾನ ಆಧಾರಿತ ಶೌಚಾಲಯ ನಿರ್ಮಾಣ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಣೆ ಮಾಡುವ ಮೂಲಕ ಶಿಫಾ ಜಮಾದಾಯ ಉದಯೋನ್ಮುಖ ಸಮಾಜ ಸೇವಕಿಯಾಗಿ ಮುನ್ನಡೆಯುತ್ತಿದ್ದಾರೆ. ರಷ್ಯಾದಲ್ಲಿ ಅನೇಕ ರಾಷ್ಟ್ರಗಳ ಪ್ರಮುಖರ ಸಮಕ್ಷಮದಲ್ಲಿ ವಿಶ್ವ ಶಾಂತಿಯ ಸಂದೇಶ ಸಾರಿರುವುದು ಹೆಮ್ಮೆ ತರಿಸಿದೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾತನಾಡಿ, ವಿಜಯಪುರ ಯುವತಿ ರಷ್ಯಾ ಶೃಂಗ ಸಭೆಯಲ್ಲಿ ಭಾಗವಹಿಸಿ ತಮ್ಮ ವಿಚಾರ ಮಂಡನೆ ಮಾಡಿರುವುದು, ಅದರಲ್ಲೂ ಭಾರತೀಯ ಸಂಸ್ಕೃತಿಯ ಧ್ಯೇಯೋದ್ದೇಶಗಳನ್ನು ಸಾರಿರುವುದು ಸಂತೋಷ ತರಿಸಿದೆ. ಇಡೀ ಜಿಲ್ಲೆ ಹೆಮ್ಮೆ ಪಡುವ ಸಾಧನೆ ಇದಾಗಿದೆ ಎಂದು ಹುರಿದುಂಬಿಸಿದರು.
ಸನ್ಮಾನ ಸ್ವೀಕರಿಸಿದ ಕು.ಶಿಫಾ ಜಮಾದಾರ, ಭಗವಂತನ ಅನುಗ್ರಹ, ವಿಜಯಪುರ ಜಿಲ್ಲೆಯ ಜನತೆಯ ಆಶೀರ್ವಾದ ಬಲ, ತಂದೆ-ತಾಯಿ ಪ್ರೋತ್ಸಾಹದಿಂದ ಈ ಅವಕಾಶ ಪ್ರಾಪ್ತಿಯಾಯಿತು. ನಿಮ್ಮೆಲ್ಲರ ಮಾರ್ಗದರ್ಶನದಲ್ಲಿ ಜಿಲ್ಲೆಗೆ ಕೀರ್ತಿ ತರುವ ಕೆಲಸವನ್ನು ಮಾಡಲು ಸದಾ ಶ್ರಮಿಸುವೆ. ಈ ದೊಡ್ಡ ಅವಕಾಶ ನನಗೆ ಇನ್ನಷ್ಟೂ ಉತ್ತಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಿದೆ ಎಂದರು.
ಶಿಫಾಗೆ ಜಿಲ್ಲಾಧಿಕಾರಿ ಆನಂದ ಸನ್ಮಾನ


