ವಿಜಯಪುರ ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ಸಾರ್ವಜನಿಕ ಸೇವೆ, ಕಡತ ವಿಲೇವಾರಿ, ದಾಖಲೆ ನಿರ್ವಹಣೆ ಪರಿಶೀಲನೆ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 14 : ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಬುಧವಾರ ವಿಜಯಪುರ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ, ಆಡಳಿತಾತ್ಮಕ ಕಾರ್ಯವೈಖರಿ, ಸಾರ್ವಜನಿಕ ಸೇವೆ, ಕಡತಗಳ ವಿಲೇವಾರಿ ಹಾಗೂ ದಾಖಲೆಗಳ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ತಹಶೀಲ್ದಾರ್ ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಅವರು, ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅರ್ಜಿಗಳು, ಅವುಗಳ ವಿಲೇವಾರಿ ಪ್ರಕ್ರಿಯೆ ಹಾಗೂ ಬಾಕಿ ಇರುವ ಕಡತಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸರ್ಕಾರಿ ಸೇವೆಗಳನ್ನು ಸಾರ್ವಜನಿಕರಿಗೆ ಯಾವುದೇ ವಿಳಂಬವಿಲ್ಲದೆ ನಿಗದಿತ ಕಾಲಮಿತಿಯಲ್ಲಿ ಒದಗಿಸಬೇಕು. ಅಧಿಕಾರಿಗಳ ಹಂತದಲ್ಲಿಯೇ ಇತ್ಯರ್ಥಪಡಿಸಬಹುದಾದ ಕೆಲಸಗಳನ್ನು ಅನಗತ್ಯವಾಗಿ ವಿಳಂಬಿಸದೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅರ್ಜಿಗಳನ್ನು ನಿಯಮಾನುಸಾರ ಕಾಲಮಿತಿಯೊಳಗೆ ವಿಲೇವಾರಿ ಮಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಯಾವುದೇ ಕಡತ ಅಥವಾ ವಹಿ ಬಾಕಿ ಉಳಿಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ನಂತರ ತಹಶೀಲ್ದಾರ್ ಕಚೇರಿಯ ಆಧುನಿಕ ಅಭಿಲೇಖಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಹಳೆಯ ದಾಖಲೆಗಳ ಸಂಗ್ರಹಣೆ, ಡಿಜಿಟಲೀಕರಣ ಹಾಗೂ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಭೂ ಸುರಕ್ಷೆ ಯೋಜನೆಯಡಿ ಸಂರಕ್ಷಿಸಲಾಗುತ್ತಿರುವ ಹಳೆಯ ದಾಖಲೆಗಳನ್ನು ವ್ಯವಸ್ಥಿತವಾಗಿ ಕಾಪಾಡಿ, ಅಗತ್ಯವಿದ್ದಾಗ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಬಳಿಕ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಅವರು, ಕಚೇರಿಯಲ್ಲಿ ದೊರೆಯುತ್ತಿರುವ ಸೇವೆಗಳು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.
ಇದೇ ವೇಳೆ ಜಿಲ್ಲಾಡಳಿತ ಭವನದ ನಿರ್ಮಾಣ ಕಾಮಗಾರಿಯ ಪ್ರಗತಿಯನ್ನೂ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಜುಫಿಶಾನ್ ಹಕ್, ಗ್ರೇಡ್-2 ತಹಶೀಲ್ದಾರ್ ಗುರುರಾಜ ನಾಯಕ, ಉಪತಹಶೀಲ್ದಾರ್ ಮಜೀದ್ ಇನಾಮದಾರ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Share this