ಸಪ್ತಸಾಗರ ವಾರ್ತೆ,ವಿಜಯಪುರ, ಅ.13:
ಹಿರಿಯ ನಾಗರಿಕರಲ್ಲಿ ಹೆಚ್ಚುತ್ತಿರುವ ಬುದ್ಧಿಮಾಂದ್ಯತೆ (ಡಿಮೆನ್ಷಿಯಾ) ಕುರಿತು ಜಾಗೃತಿ ಮೂಡಿಸುವುದು ಹಾಗೂ ಆರಂಭಿಕ ಹಂತದಲ್ಲೇ ಕಾಯಿಲೆ ಪತ್ತೆಹಚ್ಚುವ ಉದ್ದೇಶದಿಂದ ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ವೃದ್ಧಾಪ್ಯ ವೈದ್ಯಕೀಯ ವಿಭಾಗದಲ್ಲಿ ಮಂಗಳವಾರ ಬುದ್ಧಿಮಾಂದ್ಯತೆ ತಪಾಸಣಾ ಶಿಬಿರ ನಡೆಯಿತು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಕಚೇರಿ ಸಹಯೋಗದಲ್ಲಿ, ಅಟಲ್ ವಯೋ ಅಭ್ಯುದಯ ಯೋಜನೆ ಹಾಗೂ ಹಿರಿಯ ನಾಗರಿಕರ ರಾಜ್ಯ ಕ್ರಿಯಾ ಯೋಜನೆಯಡಿ ಆಯೋಜಿಸಿದ್ದ ಶಿಬಿರದಲ್ಲಿ ಸುಮಾರು 100 ಹಿರಿಯ ನಾಗರಿಕರಿಗೆ ಸಮಗ್ರ ಆರೋಗ್ಯ ಮೌಲ್ಯಮಾಪನ ಹಾಗೂ ಬುದ್ಧಿಮಾಂದ್ಯತೆ ತಪಾಸಣೆ ನಡೆಸಲಾಯಿತು.
ಶಿಬಿರ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಕೆ.ಕೆ. ಚವ್ಹಾಣ ಮಾತನಾಡಿ, “ಮರೆವಿನ ಕಾಯಿಲೆಯಿಂದ ಬಳಲುವವರನ್ನು ಮರೆಯದಿರೋಣ”. ಹಿರಿಯರು ಮಾನಸಿಕ ನೆಮ್ಮದಿ, ದೈಹಿಕ ಚಟುವಟಿಕೆ ಹಾಗೂ ಸಕ್ರಿಯ ಜೀವನಶೈಲಿಗೆ ಆದ್ಯತೆ ನೀಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ವೃದ್ಧಾಪ್ಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಆನಂದ ಪಿ. ಅಂಬಲಿ ಮಾತನಾಡಿ, ಹಿರಿಯರಲ್ಲಿ ಬುದ್ಧಿಮಾಂದ್ಯತೆ ಪ್ರಕರಣಗಳು ಹೆಚ್ಚುತ್ತಿದ್ದು, ಅರಿವಿನ ಕೊರತೆಯಿಂದ ಹಲವು ಪ್ರಕರಣಗಳು ಆರಂಭಿಕ ಹಂತದಲ್ಲೇ ಪತ್ತೆಯಾಗುತ್ತಿಲ್ಲ. 2014ರಿಂದ ವಿಭಾಗದಲ್ಲಿ ಬುದ್ಧಿಮಾಂದ್ಯತೆ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದ್ದು, ರೋಗಿಗಳ ತಪಾಸಣೆ ಮತ್ತು ಆರೈಕೆಗೆ ಆದ್ಯತೆ ನೀಡಲಾಗುತ್ತಿದೆ. ರೋಗಿಗಳ ಆರೈಕೆದಾರರೂ ಹಲವು ಮಾನಸಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಹಾಗೂ ಡೀನ್ ಡಾ. ತೇಜಸ್ವಿನಿ ವಲ್ಲಭ ಮಾತನಾಡಿ, ಹಿರಿಯರು ಬುದ್ಧಿಮಾಂದ್ಯತೆ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗಳಿಗೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಕುಟುಂಬದವರ ಪ್ರೀತಿ, ಕಾಳಜಿ ಹಾಗೂ ಆತ್ಮೀಯ ಆರೈಕೆ ಹಿರಿಯರ ಆರೋಗ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಜಗದೀಶ ಕೆ. ಮಾತನಾಡಿ, ಇದೇ ರೀತಿಯ ಶಿಬಿರವನ್ನು ಅ.15ರಂದು ಇಂಡಿ ತಾಲ್ಲೂಕಿನಲ್ಲಿಯೂ ಆಯೋಜಿಸಲಾಗುವುದು ಎಂದು ತಿಳಿಸಿದರು.
ವೈದ್ಯಕೀಯ ಅಧೀಕ್ಷಕ ಡಾ. ಎಸ್.ಎನ್. ಬೆಂಟೂರ ಮಾತನಾಡಿ, ದಾದಿಯರಿಗೆ ಬುದ್ಧಿಮಾಂದ್ಯತೆ ಆರೈಕೆಯ ತರಬೇತಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕುಟುಂಬದ ಸದಸ್ಯರಿಗೂ ತರಬೇತಿ ನೀಡುವ ಯೋಜನೆಯಿದೆ ಎಂದರು.
ನಿವೃತ್ತ ಸರ್ಕಾರಿ ನೌಕರರ ಸಂಘದ ಪ್ರತಿನಿಧಿಗಳಾದ ಎಸ್.ಪಿ. ಬಿರಾದಾರ, ಎಸ್.ಐ. ಇಂಗಳೇಶ್ವರ ಉಪಸ್ಥಿತರಿದ್ದರು. ಡಾ. ಸೃಷ್ಟಿ ಉಡುಪ ನಿರೂಪಿಸಿದರು. ವೈದ್ಯರಾದ ಡಾ. ಮಂಜುನಾಥ ಮಸಳಿ, ಡಾ. ವಿರೂಪಾಕ್ಷಪ್ಪ ಬಿರಾದಾರ, ಡಾ. ಮೊಹಮ್ಮದ್ ಅಬ್ರಾರ್ ಉಲ್ ಹಕ್, ಡಾ. ಗೌತಮಿ ಎಸ್.ಜಿ. ಹಾಗೂ ನಬೀಸಾಬ್ ಜೈನಾಪುರ ತಪಾಸಣೆ ನಡೆಸಿದರು.
ಹಿರಿಯರ ಮರೆವಿನ ಕಾಯಿಲೆ ನಿರ್ಲಕ್ಷಿಸದಿರಿ, ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಲು ಸಲಹೆ


