ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 25:
ನಿಶ್ಚಿತಗುರಿ, ಅಚಲ ಶೃದ್ಧೆ, ಅವಿರತ ಪ್ರಯತ್ನ, ಸರಳ ಆಲೋಚನೆಗಳಿಂದ ಇಂದಿನ ಮಕ್ಕಳು ಸೃಜನಶೀಲ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ಅಶೋಕ ಬಿರಾದಾರ ಹೇಳಿದರು.
ರವಿವಾರ ನಗರದ ಷಣ್ಮುಖಾರೂಢ ಮಠದಲ್ಲಿ ಅಭಿನವಶ್ರೀ ಕೋಚಿಂಗ್ ಕ್ಲಾಸ್ ನ ಬೇಸಿಗೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.
ತಾಯಿ, ತಂದೆ, ಗುರುಗಳನ್ನು ಪ್ರೀತಿಯಿಂದ ಕಾಣುತ್ತಾ, ಅವರ ಮಾರ್ಗದರ್ಶನದಲ್ಲಿ ದೇಶದ ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಸಮಯ ವ್ಯರ್ಥ ಮಾಡದೆ, ವಿದ್ಯೆಯ ಮಹತ್ವ ಅರಿತು, ಕಠಿಣ ಪರಿಶ್ರಮದಿಂದ ಜ್ಞಾನ ಸಂಪಾದಿಸುವತ್ತ ಮನಸ್ಸನ್ನು ಕೇಂದ್ರೀಕರಿಸಬೇಕು ಎಂದು ಹೇಳಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಅಧ್ಯಯನದ ಅಭಿರುಚಿ, ನವೋತ್ಸಾಹದೊಂದಿಗೆ ಪ್ರತಿನಿತ್ಯ ಮಕ್ಕಳು ಜ್ಞಾನಾರ್ಜನೆಯಲ್ಲಿ ತೊಡಗಬೇಕು. ಅಪಾರಜ್ಞಾನ ಸಂಪಾದಿಸಿ, ಶ್ರೇಷ್ಠ ಸಾಧನೆಯೊಂದಿಗೆ ಸಮಾಜದ ಋಣಭಾರ ತೀರಿಸುವಂತಾಗಬೇಕು. ಇಚ್ಚಾಶಕ್ತಿ, ದೃಢ ಪ್ರಯತ್ನದಿಂದ ಯಶಸ್ಸು ಪಡೆಯಬೇಕು ಎಂದು ಹೇಳಿದರು.
ಸಾಹಿತಿ ಎ.ಎಚ್. ಕೊಳಮಲಿ ಮಾತನಾಡಿ, ಇಂದಿನ
ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ರೂಢಿಸಬೇಕು. ಪೋಷಕರು ಜೀವನ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳು
ಶಿಸ್ತು, ಸಂಯಮ ಹಾಗೂ ನಿರಂತರ ಅಧ್ಯಯನದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ವಿಜಯಕುಮಾರ ಮಮದಾಪುರ, ಪ್ರಾಣೇಶ, ಶ್ರೀಶೈಲ ತೇಲಿ, ಬಿ.ಎಸ್.ಗಸ್ತಿ, ಸಿದ್ದನಗೌಡ ಬಿರಾದಾರ, ಶಿಕ್ಷಕರಾದ ಪ್ರಿಯಾಂಕ, ವೀರೇಶ, ಕಾರ್ತಿಕ, ಈಶ್ವರ ಹಡಗಿನಾಳ, ಶಿವಪುತ್ರ, ಗೌಡಪ್ಪ ಬಿರಾದಾರ, ರಮೇಶ, ರೂಪಾ, ಲಕ್ಷ್ಮಿ, ಅಂಜುಮ, ದೀಪಾ, ಶಬಾನ, ಪೂಜಾ, ಸುಶ್ಮಿತಾ ಸೇರಿದಂತೆ ಪಾಲಕರು, ತಾಯಂದಿರು, ಮಕ್ಕಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಸಾಧಕರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಸಮಯ ವ್ಯರ್ಥ ಮಾಡದೆ, ಜ್ಞಾನ ಸಂಪಾದಿಸಿ-ಅಶೋಕ ಬಿರಾದಾರ


