ಕರಡು ಮತದಾರರ ಪಟ್ಟಿ ಪ್ರಕಟ. ಹೆಸರು ಪರಿಶೀಲಿಸಿಕೊಳ್ಳಿ; ಸೆ.23ರೊಳಗೆ ಹಕ್ಕು-ಆಕ್ಷೇಪಣೆ ಸಲ್ಲಿಸಿ. ಜಿಲ್ಲಾಧಿಕಾರಿ ಡಾ. ಆನಂದ ಕೆ. ಮನವಿ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ.1: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಅಡಿಯಲ್ಲಿ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಜಿಲ್ಲೆಯ ಪ್ರತಿಯೊಬ್ಬ ಮತದಾರರು ಪರಿಶೀಲಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಮನವಿ ಮಾಡಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಆ.24ರಂದು ಜಿಲ್ಲೆಯ ಎಲ್ಲ ತಹಶೀಲ್ದಾರರ ಕಚೇರಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಲ್ಲದೆ, ಆಯಾ ಮತಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳ ಬಳಿಯೂ ಪಟ್ಟಿ ಲಭ್ಯವಿದ್ದು, ಮತದಾರರು ಪರಿಶೀಲಿಸಬಹುದಾಗಿದೆ.
ಕರಡು ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಕೈಬಿಟ್ಟಿದ್ದರೆ ಅಥವಾ ಯಾವುದೇ ಹಕ್ಕು ಹಾಗೂ ಆಕ್ಷೇಪಣೆಗಳಿದ್ದಲ್ಲಿ ಸೆ.23ರೊಳಗೆ ಸಂಬಂಧಿಸಿದ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ಅಥವಾ ತಹಶೀಲ್ದಾರರ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲೂ ಪರಿಶೀಲನೆ

ಮತದಾರರು ಚುನಾವಣಾ ಆಯೋಗದ ವೆಬ್‌ಸೈಟ್‌ ಹಾಗೂ ವಿಜಯಪುರ ಜಿಲ್ಲಾ ವೆಬ್‌ಪೋರ್ಟಲ್‌ನಲ್ಲಿ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಬಹುದು.
ಅರ್ಹ ಮತದಾರರ ಹೆಸರು ಕರಡು ಪಟ್ಟಿಯಲ್ಲಿ ಇಲ್ಲದಿದ್ದರೆ ಹಾಗೂ 2026ರ ಅಕ್ಟೋಬರ್ 1ರಂದು 18 ವರ್ಷ ಪೂರ್ಣಗೊಳಿಸಲಿರುವ ಯುವ ಮತದಾರರು ನಮೂನೆ-6 ಭರ್ತಿ ಮಾಡಿ ಸಂಬಂಧಿಸಿದ ತಹಶೀಲ್ದಾರರ ಕಚೇರಿ ಅಥವಾ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು.
Voter Service Portal ಮೂಲಕವೂ ಆನ್‌ಲೈನ್‌ನಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಮತದಾರರು ಯಾವುದೇ ವಿಳಂಬ ಮಾಡದೆ ಕರಡು ಪಟ್ಟಿಯನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ನಿಗದಿತ ಅವಧಿಯೊಳಗೆ ಹಕ್ಕು-ಆಕ್ಷೇಪಣೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ತಿಳಿಸಿದ್ದಾರೆ.

Share this