ಸಪ್ತಸಾಗರ ವಾರ್ತೆ,ವಿಜಯಪುರ, ಆ. 18:
ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅವರಿಗೆ ಸಚಿವ ಸ್ಥಾನ ಸಿಗದಿರುವ ಅಸಮಾಧಾನದಿಂದ ಹಾಲುಮತ ಸಮಾಜವನ್ನು ರಾಜಕೀಯಕ್ಕೆ ಎಳೆದು ತರುತ್ತಿರುವುದು ಖಂಡನೀಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಂಗೀತಾ ದಿನ್ನಿ ಹೇಳಿದರು.
ವಿಜಯಪುರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಹಾಲುಮತ ಸಮಾಜದ ಮಹಿಳೆಯನ್ನು ಆಯ್ಕೆ ಮಾಡುವ ಕುರಿತು ಎಂ.ಬಿ. ಪಾಟೀಲ ಹಾಗೂ ಶಿವಾನಂದ ಪಾಟೀಲರು ಚರ್ಚಿಸಿ ನಿರ್ಧರಿಸಿದ್ದರು. ಅದರಂತೆ ತಮಗೆ ಜಿಲ್ಲೆಯ ಪ್ರಥಮ ಹಾಲುಮತ ಮಹಿಳಾ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಅವಕಾಶ ಕಲ್ಪಿಸಲಾಗಿತ್ತು ಎಂದು ಸ್ಮರಿಸಿದರು.
ಹಾಲುಮತ ಸಮಾಜದ ಮಹಿಳೆಯರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಏರಿಸುವಲ್ಲಿ ಎಂ.ಬಿ. ಪಾಟೀಲರ ಪಾತ್ರವಿದೆ. ಮುದ್ದೇಬಿಹಾಳದ ಕೆಂಚಪ್ಪ ಬಿರಾದಾರ, ತಿಕೋಟಾದ ತಮ್ಮಣ್ಣ ಹಂಗರಗಿ ಹಾಗೂ ಸಿಂದಗಿಯ ಮಲ್ಲಣ್ಣ ಸಾಲಿ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡುವಲ್ಲಿಯೂ ಅವರ ಪಾತ್ರವಿದೆ ಎಂದು ಹೇಳಿದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಹಾಲುಮತ ಸಮಾಜದ ನೀಲಮ್ಮ ಮೇಟಿ ಹಾಗೂ ತಮ್ಮ ಪತ್ನಿ ಸುಜಾತಾ ಕಳ್ಳಿಮನಿ ಅವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಬಹುಮತ ಇರಲಿಲ್ಲ. ಪಕ್ಷದ ಕೆಲವರು ಪಕ್ಷಾಂತರ ಮಾಡಿದ್ದರೂ, ಇದನ್ನು ಸವಾಲಾಗಿ ಸ್ವೀಕರಿಸಿದ ಎಂ.ಬಿ. ಪಾಟೀಲರು ತನು, ಮನ, ಧನದಿಂದ ಬೆಂಬಲಿಸಿ ಅಧ್ಯಕ್ಷ ಸ್ಥಾನ ದೊರಕಿಸಿಕೊಟ್ಟರು ಎಂದು ಹೇಳಿದರು.
ನನ್ನ ಪತ್ನಿ ಸುಜಾತಾ ಕಳ್ಳಿಮನಿ, ನೀಲಮ್ಮ ಮೇಟಿ ಹಾಗೂ ಸಂಗೀತಾ ದಿನ್ನಿ—ಈ ಮೂವರು ಹಾಲುಮತ ಮಹಿಳೆಯರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೇರಲು ಎಂ.ಬಿ. ಪಾಟೀಲರೇ ಕಾರಣರಾಗಿದ್ದಾರೆ. ಹೀಗಾಗಿ, ಹಾಲುಮತ ಸಮಾಜದ ಮಹಿಳೆಯನ್ನು ಅಧ್ಯಕ್ಷ ಸ್ಥಾನಕ್ಕೇರಿಸಲು ‘ಸರ್ಕಸ್ ಮಾಡಬೇಕಾಯಿತು’ ಎಂಬ ನಾಡಗೌಡರ ಹೇಳಿಕೆ ಸರಿಯಲ್ಲ ಎಂದರು.
ನಾಡಗೌಡರು ಯಾರನ್ನು ಗಮನದಲ್ಲಿಟ್ಟುಕೊಂಡು ಈ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಹಿರಿಯ ಶಾಸಕರಾಗಿರುವ ಅವರಿಗೆ ಸಚಿವ ಸ್ಥಾನ ಕೇಳುವ ಹಕ್ಕು ಹಾಗೂ ಬೇಡಿಕೆ ನ್ಯಾಯಸಮ್ಮತವಾಗಿದೆ. ಅದಕ್ಕಾಗಿ ಹೈಕಮಾಂಡ್‌ನೊಂದಿಗೆ ಚರ್ಚಿಸಬೇಕು. ಆದರೆ ಸಚಿವ ಸ್ಥಾನ ವಿಚಾರದಲ್ಲಿ ಹಾಲುಮತ ಸಮಾಜವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ವಿಚಾರಕ್ಕೆ ಎಳೆದು ತರುವುದು ಅಪ್ರಸ್ತುತ ಎಂದು ಹೇಳಿದರು.
ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಮಾತನಾಡಿ, ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ತಾಲೂಕುಗಳಲ್ಲಿ ಹಾಲುಮತ ಸಮಾಜದ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂದು ಒಗ್ಗಟ್ಟಾಗಿ ಒತ್ತಾಯಿಸಲಾಗುವುದು ಎಂದು ಹೇಳಿದರು.
ಹಾಲುಮತ ಸಮಾಜವನ್ನು ರಾಜಕೀಯಕ್ಕೆ ಎಳೆಯುವುದು ಖಂಡನೀಯ: ಸಂಗೀತಾ ದಿನ್ನಿ


