ಸೋಮವಾರದೊಳಗೆ ಕ್ಷೇತ್ರ ಪರಿಶೀಲನೆ ಪೂರ್ಣ; ವರದಿ ಆಧರಿಸಿ ಅಂತಿಮ ಘೋಷಣೆ
ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 20:
ಬರ ನಿರ್ವಹಣೆ ಕೈಪಿಡಿ-2020ರ ಮೌಲ್ಯಮಾಪನ ಮಾನದಂಡಗಳ ಪ್ರಕಾರ ಇಂಡಿ, ಚಡಚಣ ಮತ್ತು ತಾಳಿಕೋಟೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಪರಿಗಣಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸೋಮವಾರದೊಳಗೆ ನಾಲ್ಕು ತಾಲೂಕುಗಳ ಕ್ಷೇತ್ರ ಪರಿಶೀಲನೆ (ಗ್ರೌಂಡ್ ಟ್ರೂಥಿಂಗ್) ಪೂರ್ಣಗೊಳಿಸಿ, ವರದಿ ಆಧರಿಸಿ ಅಂತಿಮ ಬರ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಈಗಾಗಲೇ ಮೊದಲ ಮತ್ತು ಎರಡನೇ ಪಟ್ಟಿಯಲ್ಲಿರುವ ವಿಜಯಪುರ, ಕೊಲ್ಹಾರ, ನಿಡಗುಂದಿ, ಬಸವನ ಬಾಗೇವಾಡಿ, ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಕಾರ್ಯ ಪೂರ್ಣಗೊಂಡಿದೆ. ಈ ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಸರ್ಕಾರ ಅಧಿಸೂಚಿಸಿದೆ ಎಂದು ತಿಳಿಸಿದ್ದಾರೆ.
ಸಿಂದಗಿ, ಆಲಮೇಲ, ದೇವರ ಹಿಪ್ಪರಗಿ ಮತ್ತು ಮುದ್ದೇಬಿಹಾಳ ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಕಾರ್ಯ ಪ್ರಗತಿಯಲ್ಲಿದೆ. ಸೋಮವಾರದೊಳಗೆ ಪರಿಶೀಲನೆ ಪೂರ್ಣಗೊಳಿಸಿ, ಅದರ ಆಧಾರದ ಮೇಲೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಈ ಪ್ರಕ್ರಿಯೆಯ ಮೂಲಕ ಅರ್ಹ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಬರ ಘೋಷಣೆಗೆ ವೈಜ್ಞಾನಿಕ ಮೌಲ್ಯಮಾಪನ
ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಪ್ರಕ್ರಿಯೆಯಲ್ಲಿ ನಿರಂತರ ಮೂರು ವಾರಗಳ ಒಣಹವೆ, ಉಪಗ್ರಹ ಹಾಗೂ ರಿಮೋಟ್ ಸೆನ್ಸಿಂಗ್ ದತ್ತಾಂಶ ಆಧಾರಿತ ಪರಿಣಾಮದ ಸೂಚಕಗಳನ್ನು ಪರಿಗಣಿಸಲಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಸಮಗ್ರ ಬರ ಮೌಲ್ಯಮಾಪನ ನಡೆಸಿ, ಮಧ್ಯಮ ಅಥವಾ ತೀವ್ರ ಬರಪೀಡಿತ ವರ್ಗಕ್ಕೆ ಅರ್ಹವಾಗಿರುವ ತಾಲೂಕುಗಳನ್ನು ಗುರುತಿಸಲಾಗುತ್ತದೆ.
ನಂತರ ಈ ಪಟ್ಟಿಯನ್ನು ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿಯ ಮುಂದೆ ಮಂಡಿಸಲಾಗುತ್ತದೆ. ಉಪಸಮಿತಿಯ ಅನುಮೋದನೆ ಬಳಿಕ ಕ್ಷೇತ್ರ ಪರಿಶೀಲನೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ.
ಅಧಿಸೂಚಿತ ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಆ್ಯಪ್ ಮೂಲಕ ಪರಿಶೀಲನೆ ನಡೆಸಲಾಗುತ್ತದೆ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಆ್ಯಪ್ನಿಂದ ಯಾದೃಚ್ಛಿಕವಾಗಿ ಆಯ್ಕೆಯಾದ ಗ್ರಾಮಗಳ ಸರ್ವೆ ನಂಬರ್ಗಳಲ್ಲಿ ನಾಲ್ಕು ದಿನಗಳೊಳಗೆ ಬೆಳೆ ಹಾನಿ ಮೌಲ್ಯಮಾಪನ ಮಾಡುತ್ತಾರೆ.
ಕ್ಷೇತ್ರ ಪರಿಶೀಲನಾ ವರದಿಯ ಆಧಾರದ ಮೇಲೆ ತಾಲೂಕುಗಳನ್ನು ಮಧ್ಯಮ ಅಥವಾ ತೀವ್ರ ಬರಪೀಡಿತ ಎಂದು ವರ್ಗೀಕರಿಸಲಾಗುತ್ತದೆ. ಬಳಿಕ ವರದಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ, ಅಂತಿಮ ಬರ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.


