ಮನಗೂಳಿಯಲ್ಲಿ ಭೂಕಂಪನ: ಬೆಚ್ಚಿ ಬಿದ್ದ ಜನ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 22:
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿ ಜನರು ಬೆಚ್ಚಿಬಿದ್ದಿದ್ದಾರೆ.
ಬುಧವಾರ ಬೆಳಗ್ಗೆ 7-43 ಗಂಟೆಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪನದಲ್ಲಿ
2.9 ತೀವ್ರತೆಯಲ್ಲಿ ಕಂಪಿಸಿದೆ.
ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಸುತ್ತಮುತ್ತಲಿನ
ಯರನಾಳ, ಹತ್ತರಕಿಹಾಳ, ನಂದ್ಯಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಕಂಪನವಾಗಿದೆ.
2.5 ಕಿಲೋ ಮೀಟರ್ ಭೂಮಿ ಆಳದವರೆಗೆ ಭೂಕಂಪನ ಸಂಭವಿಸಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಭೂಕಂಪನ ಮಾಹಿತಿಯನ್ನು ನೀಡಿದೆ.
ಭೂಮಿಯಾಳದಿಂದ ಮೂರು ಬಾರಿ ಭಾರಿ ಶಬ್ದ ಕೇಳಿ ಬಂದಿದ್ದು, ಜನರು ಗಾಬರಿಯಿಂದ ಮನೆಯಾಚೆ ಓಡಿ ಬಂದಿದ್ದಾರೆ.
ದೀಪಾವಳಿ ಪಾಡ್ಯದ ಖುಷಿಯಲ್ಲಿದ್ದ ಜನರಿಗೆ ಆತಂಕ ಮನೆ ಮಾಡಿದೆ.
ಕಡಿಮೆ ತೀವ್ರತೆಯ ಕಂಪನ ಆಗಿದೆ
ಜನರು ಭಯಭೀತರಾಗಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.

Share this