ಶಿಕ್ಷಣವು ಕೇವಲ ಪದವಿ ಪಡೆಯುವುದಕ್ಕೆ ಮಾತ್ರ ಸೀಮಿತವಲ್ಲ:ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

ಸಪ್ತಸಾಗರ ವಾರ್ತೆ, ವಿಜಯಪುರ, ಏ. 21:
ಮಹಿಳಾ ಸಬಲೀಕರಣಕ್ಕೆ ಶಿಕ್ಷಣವೇ ಮುಖ್ಯ ಅಸ್ತ್ರ. ಶಿಕ್ಷಣವು ಕೇವಲ ಪದವಿ ಪಡೆಯುವುದಕ್ಕೆ ಮಾತ್ರ ಸೀಮಿತವಲ್ಲ, ಅದು ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ ಮತ್ತು ಸಮಾಜ ಸೇವೆಗೆ ದಾರಿ ದೀಪವಾಗುತ್ತದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 17ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕ್ಕ ಮಹಾದೇವಿಯವರ ಆದರ್ಶಗಳನ್ನು ಸ್ಮರಿಸಿ, ಇಂದಿನ ಯುವತಿಯರು ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪದವಿ ಪಡೆದ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಿದ ರಾಜ್ಯಪಾಲರು, ಈ ಸಾಧನೆ ನಿಮ್ಮ ಪರಿಶ್ರಮ ಮತ್ತು ದೃಢಸಂಕಲ್ಪದ ಪ್ರತಿಫಲವಾಗಿದೆ. ಪದವಿ ಪ್ರದಾನವು ಜೀವನದ ಮಹತ್ವದ ಘಟ್ಟವಾಗಿದ್ದು, ಇದು ನಿಮಗೆ ಹೊಸ ಅವಕಾಶಗಳು ಮತ್ತು ಸವಾಲುಗಳತ್ತ ದಾರಿ ತೆರೆದಿಡುತ್ತದೆ ಎಂದು ತಿಳಿಸಿದರು.
ಡಿಜಿಟಲ್ ಯುಗದಲ್ಲಿ ಮಹಿಳೆಯರಿಗೆ ಅಪಾರ ಅವಕಾಶಗಳಿದ್ದು, ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಕರೆ ನೀಡಿದ ಅವರು, ಡಿಜಿಟಲ್ ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸಿದರು.
“ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾ” ಎಂಬ ಶ್ಲೋಕವನ್ನು ಉಲ್ಲೇಖಿಸಿದ ರಾಜ್ಯಪಾಲರು, ಮಹಿಳೆಯರನ್ನು ಗೌರವಿಸುವ ಸಮಾಜವೇ ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆಯುತ್ತದೆ ಎಂದು ಹೇಳಿದರು.
ವಿಶ್ವವಿದ್ಯಾನಿಲಯದ ಪರವಾಗಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣನವರ ಮತ್ತಿತರರು ಸನ್ಮಾನಿಸಿದರು.
ಘಟಿಕೋತ್ಸವದ ಮೆರವಣಿಗೆಯ ನೇತೃತ್ವವನ್ನು ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣನವರ ವಹಿಸಿದ್ದರು. ಪಿಎಚ್‌ಡಿ ಪದವೀಧರರ ಹೆಸರುಗಳನ್ನು ಕುಲಸಚಿವ ಶಂಕರಗೌಡ ಸೋಮನಾಳ ಪ್ರಸ್ತುತಪಡಿಸಿದರು. ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ವಂದಿಸಿದರು. ಪ್ರೊ.ಯು.ಕೆ.ಕುಲಕರ್ಣಿ ಮತ್ತು ಡಾ.ರೋಹಿಣಿ ಭೂಸನೂರಮಠ ಕಾರ್ಯಕ್ರಮ ನಿರೂಪಿಸಿದರು.

Share this