ಸಪ್ತಸಾಗರ ವಾರ್ತೆ,ಇಂಡಿ, 12:
ಮಕ್ಕಳು ದೇಶದ ಭವಿಷ್ಯದ ಆಸ್ತಿ. ಮಕ್ಕಳ ಕೈಯಲ್ಲಿ ಪುಸ್ತಕವಿರಬೇಕು, ದುಡಿಮೆಯ ಆಯುಧ ಅಲ್ಲ. ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಮತ್ತು ಸುರಕ್ಷಿತ ಬಾಲ್ಯವನ್ನು ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಬಾಲ ಕಾರ್ಮಿಕ ವಿರೋಧಿ ದಿನವನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಬಾಲ ಕಾರ್ಮಿಕ ಪದ್ಧತಿಯು ಮಕ್ಕಳ ಬಾಲ್ಯ, ಆರೋಗ್ಯ, ಶಿಕ್ಷಣ ಕಸಿದುಕೊಳ್ಳುವ ಸಾಮಾಜಿಕ ಪಿಡುಗು. ಅದು ದೇಶದ ಭವಿಷ್ಯಕ್ಕೆ ಮಾರಕ. ಇದರ ನಿರ್ಮೂಲನೆಗೆ ಶಿಕ್ಷಣವೇ ಅಸ್ತ್ರವಾಗಿದ್ದು, ಎಲ್ಲ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತಂದು ಮಕ್ಕಳ ಸುಂದರ ಭವಿಷ್ಯಕ್ಕೆ ದಾರಿಯಾಗೋಣ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ.ಐ. ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಸಂಪೂರ್ಣ ಕುಂಠಿತಗೊಳ್ಳುತ್ತದೆ. ಅವರು ಶಿಕ್ಷಣದಿಂದ ವಂಚಿತರಾಗುವುದರಿಂದ ಅವರ ಭವಿಷ್ಯವೇ ಕತ್ತಲೆಯಾಗುತ್ತದೆ. ನಾವೆಲ್ಲರೂ ಒಗ್ಗೂಡಿ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡೋಣ ಎಂದು ಹೇಳಿದರು.
ಶಿಕ್ಷಕರಾದ ಎಸ್.ಎಸ್. ಅರಬ, ಎನ್.ಬಿ. ಚೌಧರಿ, ಎಸ್.ಪಿ. ಪೂಜಾರಿ, ಅತಿಥಿ ಶಿಕ್ಷಕ ಅಫ್ತಾಬ್ ಮುಲ್ಲಾ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.
ಬಾಲ ಕಾರ್ಮಿಕ ಪದ್ಧತಿ ನಿವಾರಣೆಗೆ ಶಿಕ್ಷಣವೇ ಅಸ್ತ್ರ- ಸಂತೋಷ ಬಂಡೆ


