ಈದ್ ಮಿಲಾದ್ ಮೆರವಣಿಗೆ: ಭಾವೈಕ್ಯತೆಯ ಸಂದೇಶ ಸಾರಲು ಸಜ್ಜಾಗಿರುವ ವಿಜಯಪುರ

ಸರ್ವಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮುಖಂಡರ ಕರೆ

ಸಪ್ತಸಾಗರ ವಾರ್ತೆ,ವಿಜಯಪುರ, ಆ.21:
ಐತಿಹಾಸಿಕ ವಿಜಯಪುರದ ಸೌಹಾರ್ದತೆ, ಸಹಬಾಳ್ವೆ ಹಾಗೂ ಸರ್ವಧರ್ಮೀಯ ಭಾವೈಕ್ಯತೆಯ ಪ್ರತೀಕವಾಗಿ ಆ.25ರಂದು ನಡೆಯಲಿರುವ ಈದ್ ಮಿಲಾದ್ ಮೆರವಣಿಗೆಗೆ ಸರ್ವಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಧಾರ್ಮಿಕ ಹಾಗೂ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಲ್ಲ. ಶತಮಾನಗಳಿಂದ ವಿಜಯಪುರದಲ್ಲಿ ಬೆಳೆದು ಬಂದಿರುವ ಪ್ರೀತಿ, ಸಹೋದರತ್ವ, ಮಾನವೀಯತೆ ಮತ್ತು ಸೌಹಾರ್ದ ಪರಂಪರೆಯನ್ನು ಸಾರುವ ಮಹತ್ವದ ಸಂದರ್ಭವಾಗಿದೆ ಎಂದು ಹಾಶಿಂಪೀರ ದರ್ಗಾದ ಜೈನುಲ್ ಆಬಿದಿನ್ ಹಾಶ್ಮಿ ಹೇಳಿದರು.
ಆದಿಲ್ ಶಾಹಿ ಕಾಲದಿಂದಲೂ ವಿಜಯಪುರವು ಸೂಫಿ ಸಂತರು ಹಾಗೂ ಸರ್ವಧರ್ಮೀಯ ಸಹಬಾಳ್ವೆಗೆ ಹೆಸರುವಾಸಿಯಾಗಿದೆ. ಸುಮಾರು 400 ವರ್ಷಗಳ ಹಿಂದೆ ಸೂಫಿ ಸಂತರು ಮಕ್ಕಾ-ಮದೀನಾದಿಂದ ಪ್ರವಾದಿ ಮೊಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಂ ಅವರ ಮೂಹೆ ಮುಬಾರಕ್‌ (ಪವಿತ್ರ ಕೂದಲು)ವನ್ನು ವಿಜಯಪುರಕ್ಕೆ ತಂದು ಆಸಾರ ಮಹಲ್‌ನಲ್ಲಿ ಸಂರಕ್ಷಿಸಿದ್ದಾರೆ ಎಂಬುದು ಇಲ್ಲಿನ ಪರಂಪರೆ ಹಾಗೂ ಜನರ ನಂಬಿಕೆಯಾಗಿದೆ ಎಂದು ತಿಳಿಸಿದರು.

ಆ.25ರಂದು ಮೂಹೆ ಮುಬಾರಕ್ ಜಿಯಾರತ್

ಮೂಹೆ ಮುಬಾರಕ್‌ನ ಜಿಯಾರತ್‌ಗೆ ವರ್ಷದಲ್ಲಿ ಒಂದು ದಿನ ಮಾತ್ರ ಅವಕಾಶವಿದ್ದು, ಈ ಬಾರಿ ಆ.25ರಂದು ಜಿಯಾರತ್ ನಡೆಯಲಿದೆ. ಇದರ ಅಂಗವಾಗಿ ನಡೆಯುವ ಮೆರವಣಿಗೆಗೆ ವಿಶೇಷ ಮಹತ್ವವಿದೆ ಎಂದು ಮೌಲಾನಾ ಯುಸುಫ್ ಖಾದ್ರಿ ಹೇಳಿದರು.
“ವಿಜಯಪುರದ ನಿಜವಾದ ಶಕ್ತಿ ಅದರ ಭಾವೈಕ್ಯತೆಯಲ್ಲಿದೆ. ಇಲ್ಲಿ ಧರ್ಮಕ್ಕಿಂತ ಮೊದಲು ಮಾನವೀಯತೆಗೆ ಗೌರವ ನೀಡುವ ಪರಂಪರೆ ಇದೆ. ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಧರ್ಮ, ಜಾತಿ ಹಾಗೂ ಸಮುದಾಯಗಳ ಜನರು ಮೆರವಣಿಗೆಯಲ್ಲಿ ಸಹೋದರತ್ವದಿಂದ ಭಾಗವಹಿಸುವ ಮೂಲಕ ವಿಜಯಪುರದ ಸೌಹಾರ್ದತೆಯ ಸಂದೇಶವನ್ನು ಇಡೀ ರಾಜ್ಯಕ್ಕೆ ಸಾರಬೇಕು” ಎಂದು ಅವರು ಹೇಳಿದರು.

ಯುವಕರಿಗೆ ಶಾಂತಿ-ಶಿಸ್ತಿನ ಸಂದೇಶ

ಜುಲೂಸ್ ಕಮಿಟಿ ಅಧ್ಯಕ್ಷ ಮಹಮ್ಮದ್ ರಫಿ ಕಾಣೆ ಮಾತನಾಡಿ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಜತೆಗೆ ಶಾಂತಿ, ಶಿಸ್ತು ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು. ಯಾವುದೇ ರೀತಿಯ ಪ್ರಚೋದನೆ, ವದಂತಿ ಅಥವಾ ಅನಗತ್ಯ ಚರ್ಚೆಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪರಿಶೀಲಿಸದ ಮಾಹಿತಿಯನ್ನು ನಂಬದೆ, ಅಧಿಕೃತ ಮಾಹಿತಿ ಹಾಗೂ ಆಯೋಜಕರ ಸೂಚನೆಗಳಿಗೆ ಮಾತ್ರ ಆದ್ಯತೆ ನೀಡಬೇಕು. ಹಬ್ಬದ ಪಾವಿತ್ರ್ಯ ಮತ್ತು ನಗರದ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.

ಸಂಚಾರಕ್ಕೆ ಅಡ್ಡಿಯಾಗದಂತೆ ಸಹಕರಿಸಿ

ಮೆರವಣಿಗೆಯಲ್ಲಿ ಭಾಗವಹಿಸುವವರು ಪೊಲೀಸ್ ಇಲಾಖೆ ಹಾಗೂ ಆಯೋಜಕರು ನೀಡುವ ಸೂಚನೆಗಳನ್ನು ಪಾಲಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ, ಸಂಚಾರ ವ್ಯವಸ್ಥೆಗೆ ಅಡ್ಡಿಯಾಗದಂತೆ ಹಾಗೂ ನಗರದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ಮೆರವಣಿಗೆಯನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಇರಫಾನ್ ಶೇಖ್ ಮನವಿ ಮಾಡಿದರು.
ಈದ್ ಮಿಲಾದ್ ಪ್ರೀತಿ, ಶಾಂತಿ, ಮಾನವೀಯತೆ ಮತ್ತು ಸಹೋದರತ್ವದ ಸಂದೇಶ ಸಾರುವ ಪವಿತ್ರ ದಿನವಾಗಿದೆ. ವಿಜಯಪುರದ ಶತಮಾನಗಳ ಸೌಹಾರ್ದ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಸಂಕಲ್ಪದೊಂದಿಗೆ ಎಲ್ಲರೂ ಒಗ್ಗಟ್ಟಿನಿಂದ ಹಬ್ಬ ಆಚರಿಸೋಣ. ಆ.25ರ ಮೆರವಣಿಗೆ “ವಿಜಯಪುರದ ಭಾವೈಕ್ಯತೆ, ದೇಶದ ಏಕತೆ” ಎಂಬ ಸಂದೇಶವನ್ನು ಸಾರುವಂತಾಗಲಿ ಎಂದು ಮುಖಂಡರು ಆಶಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಜಮೀರ್ ಅಹ್ಮದ್ ಬಾಂಗಿ, ಈದ್ರೋಸ್ ಬಕ್ಷಿ, ನಿಜಾಮ್ ಸಿರಿಯಾಳ, ಜಿಯಾ ಪಠಾನ್, ಸೈಯದ್ ಗುಡಗುಂಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this