ವಿಷ್ಣು ಸಹಸ್ರನಾಮ ಭವನದಲ್ಲಿ ಅಷ್ಟಮ ನವರಾತ್ರಿ ಮಹೋತ್ಸವ ಆರಂಭ

ಸಪ್ತಸಾಗರ ವಾರ್ತೆ,ವಿಜಯಪುರ, ಅ.11:
ನಗರದ ತೊರವಿ ರಸ್ತೆಯ ನಿಂಬರಗಿ ಬಡಾವಣೆಯಲ್ಲಿರುವ ಶ್ರೀ ವಿಷ್ಣು ಸಹಸ್ರನಾಮ ಭವನದಲ್ಲಿ ಶ್ರೀ ವೆಂಕಟೇಶ್ವರ ದೇವರ ಅಷ್ಟಮ ನವರಾತ್ರಿ ಮಹೋತ್ಸವವು ಶ್ರದ್ಧಾ-ಭಕ್ತಿಯಿಂದ ಆರಂಭಗೊಂಡಿತು.
ಉತ್ತರಾಧಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾದ ನೇಪಾಳದ ಗಂಡಕಿ ನದಿಯ ಸಾಲಿಗ್ರಾಮದಿಂದ ನಿರ್ಮಿಸಲಾದ ಸುಮಾರು 6 ಅಡಿ ಎತ್ತರದ ಶ್ರೀ ವೆಂಕಟೇಶ್ವರ ದೇವರ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಶ್ರೀ ವ್ಯಾಸಮಧ್ವ ಸಂಸ್ಕೃತ ವಿದ್ಯಾಲಯ ಟ್ರಸ್ಟ್‌ ಕುಟುಂಬದ ನೇತೃತ್ವದಲ್ಲಿ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ 5ಕ್ಕೆ ಸುಪ್ರಭಾತ ಸೇವೆ, ತೋಮಾಲೆ ಸೇವೆ, ನಿರ್ಮಾಲ್ಯ ವಿಸರ್ಜನೆ, ಅರುಣೋದಯ ಪೂಜೆ, ಪಂಚಾಮೃತ ಅಭಿಷೇಕ ಹಾಗೂ ನೈವೇದ್ಯ ಸಮರ್ಪಣೆ ನಡೆಯಲಿದೆ. ಬೆಳಿಗ್ಗೆ 7ಕ್ಕೆ ಮಹಾಮಂಗಳಾರತಿ, ವೇದ ಪಾರಾಯಣ ಹಾಗೂ ಬೆಳಿಗ್ಗೆ 9ರವರೆಗೆ ವಿಷ್ಣು ಸಹಸ್ರನಾಮಾವಳಿ ಪಠಣ ನಡೆಯಲಿದೆ.
ಸಂಜೆ 4.40ರಿಂದ ವಿವಿಧ ಭಜನಾ ಮಂಡಳಿಗಳಿಂದ ಸಾಮೂಹಿಕ ಭಜನೆ ಮತ್ತು ಕೋಲಾಟ ನಡೆಯಲಿದ್ದು, ಸಂಜೆ 5.30ಕ್ಕೆ ಪಂ. ವಿನಯಾಚಾರ್ಯ ಗುಡಿ ಅವರಿಂದ ಶ್ರೀ ವೆಂಕಟೇಶ್ವರ ಮಹಾತ್ಮ್ಯ ಪುರಾಣ ಪ್ರವಚನ ನಡೆಯಲಿದೆ. ರಾತ್ರಿ 7.45ರಿಂದ ವಿಷ್ಣು ಸಹಸ್ರನಾಮ ಅರ್ಚನೆ ಹಾಗೂ ಅಷ್ಟಾವಧಾನ ಸೇವೆ ಜರುಗಲಿದೆ.
ಅ.13ರಂದು ಧನ್ವಂತರಿ ಹೋಮ ಹಾಗೂ ಸಂಜೆ ಸಂಗೀತ ಕಾರ್ಯಕ್ರಮ, ಅ.14ರಂದು ಗಣಹೋಮ ಮತ್ತು ಸಂಗೀತ, ಅ.15ರಂದು ಪುರುಷಸೂಕ್ತ ಹೋಮ ಹಾಗೂ ನೃತ್ಯರೂಪಕ, ಅ.16ರಂದು ಶ್ರೀ ಮಹಾಲಕ್ಷ್ಮೀ ಹೋಮ ಹಾಗೂ ನೃತ್ಯ ಕಾರ್ಯಕ್ರಮ, ಅ.17ರಂದು ಪವಮಾನ ಹೋಮ ಮತ್ತು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ.18ರಂದು ಶ್ರೀ ದುರ್ಗಾ ಹೋಮ ಹಾಗೂ ಸಂಜೆ ದುರ್ಗಾ ಮಹಾಪೂಜೆ, ಅ.19ರಂದು ಗಾಯತ್ರಿ ಮಹಾಯಾಗ ಹಾಗೂ ಸಂಗೀತ ಕಾರ್ಯಕ್ರಮ, ಅ.20ರಂದು ಮೃತ್ಯುಂಜಯ ಹೋಮ ಮತ್ತು ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ರಥೋತ್ಸವವೂ ವೈಭವದಿಂದ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಆರಂಭಿಕ ದಿನ ಧರ್ಮದರ್ಶಿ ಪಂಡಿತ ವೇದನಿಧಿ ಆಚಾರ್ಯರ ನೇತೃತ್ವದಲ್ಲಿ ಮನುಸೂಕ್ತ ಪುನಶ್ಚರಣ ಹೋಮ ನಡೆಯಿತು.
ಸೇವಾಕರ್ತ ಡಾ. ಉಪೇಂದ್ರ ನರಸಾಪುರ ದಂಪತಿಯಿಂದ ಸೇವಾಕರ್ತರಿಗೆ ವಸ್ತ್ರ ಸಮರ್ಪಣೆ ನೆರವೇರಿತು.
ಇದೇ ಸಂದರ್ಭದಲ್ಲಿ ಸೇವಾಕರ್ತರಿಗೆ ನೀಡುವ ಸ್ಮರಣಿಕೆ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು. ರಾಘವೇಂದ್ರ ಪುರೋಹಿತ, ಪ್ರಹ್ಲಾದ ಬಾಗೇವಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this