ಸಪ್ತಸಾಗರ ವಾರ್ತೆ, ವಿಜಯಪುರ,ಆ.14:
ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕೈಗೊಂಡಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ ಮುಕ್ತಾಯಗೊಂಡಿತು.
ವಿದ್ಯಾರ್ಥಿ,ಯುವಜನ, ದಲಿತ ಸಂಘಟನೆ, ಸರ್ಕಾರಿ ನಿವೃತ್ತಿ ಅಧಿಕಾರಿಗಳ ಸಂಘಟನೆ, ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ, ಸಿಐಟಿಯು ಕಾರ್ಮಿಕ ಸಂಘಟನೆ ಹಾಗೂ ಜಿಲ್ಲೆಯ ಹಿರಿಯ ಸಾಹಿತಿಗಳಿಂದ ಹೋರಾಟಕ್ಕೆ ಬೆಂಬಲ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ನಿವೃತ್ತ ಅಧಿಕಾರಿ ಸುರೇಶ ಜೆ.ಬಿ ಮಾತನಾಡಿ, ಕನಿಷ್ಠ ಜೀವನ ನಡೆಸಲು ೧೫೦೦೦ ಸಂಬಳ ಪ್ರತಿಯೊಬ್ಬ ನೌಕರರಿಗೂ ಬೇಕು. ಹಳ್ಳಿಗಳಲ್ಲಿ, ಗ್ರಾಮೀಣ ಮಟ್ಟದಲ್ಲಿ ಸಮುದಾಯದ ಆರೋಗ್ಯ ಸುಧಾರಿಸುವಲ್ಲಿ ಹಗಲಿರುಳು ಕೆಲಸ ಮಾಡುತ್ತಿರುವ ಆಶಾಗಳಿಗೆ ಸಂಬಳ ಎಷ್ಟು ಕೊಟ್ಟರೂ ಸಾಲದು. ಆದರೆ ಅವರು ಕೇಳುತ್ತಿರುವ ಕೇವಲ ೧೦೦೦೦ ರೂ. ಗಳನ್ನು ಸರ್ಕಾರ ನೀಡುತ್ತಿಲ್ಲ. ಹೀಗಾದರೆ ಆಶಾಗಳು ಬದುಕು ನಡೆಸುವುದು ತುಂಬಾ ಕಷ್ಟ ಎಂದರು. ದುಬಾರಿ ಬೆಲೆ ಏರಿಕೆ, ಶಿಕ್ಷಣ ಮಾರಾಟವಾಗುವ ಸಂದರ್ಭದಲ್ಲಿ ಮಹಿಳೆಯರು ಹೇಗೆ ಬದುಕು ಕಟ್ಟಿಕೊಳ್ಳಬೇಕು. ಆದ್ದರಿಂದ ಆಶಾಗಳ ಗೌರವಧನ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಮುಖಂಡ ಲಕ್ಷ್ಮಣ ಹಂದ್ರಾಳ ಮಾತನಾಡಿ, ಕಾರ್ಮಿಕರ ಪರ ನೀತಿಗಳು ಜಾರಿಗೊಳ್ಳಬೇಕು. ತಮ್ಮ ಆರೋಗ್ಯವನ್ನು ಕಡೆಗಣಿಸಿ ಆರೋಗ್ಯ ಸೇವೆಯಲ್ಲಿ ತೊಡಗಿರುವ ಆಶಾಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲೇಬೇಕು. ನಿಮ್ಮ ಜೊತೆಗೆ ನಮ್ಮ ಕಾರ್ಮಿಕ ಸಂಘಟನೆ ಇರುತ್ತದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿಯನ್ನು ಉದ್ದೇಶಿಸಿ ಜಮಾತ್-ಇ ಸ್ಲಾಂ ಅಧ್ಯಕ್ಷ ಎಮ್.ಎ.ಬಳಗನೂರ,
ಅಂಗನವಾಡಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷೆ ನಿಂಗಮ್ಮ ಹಿರೇಮಠ,
ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ, ಯುವಜನ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಮ ಹಿರೇಮಠ, ದಲಿತ ಸಂಘಟನೆಯ ಚೆನ್ನು ಕಟ್ಟಿಮನಿ, ಅಕ್ಷಯ, ಅಬ್ದುಲ್ ರೆಹಮಾನ್ ನಾಸಿರ್ ಇತರರು ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದರು.
ಈ ಹೋರಾಟದಲ್ಲಿ ಆಶಾ ಜಿಲ್ಲಾ ನಾಯಕರಾದ ಭಾರತಿ ದೇವಕತೆ, ಅಂಬಿಕಾ ವಳಸಂಗ, ಲೈಲಾ ಪಠಾಣ, ಲಕ್ಷ್ಮಿ ಸಿಮಿಕೇರಿ, ಮಲ್ಲಮ್ಮ ಕಂಠಿ, ಮಲ್ಲಮ್ಮ ಹರಿಜನ, ಸುಮಂಗಲ ಪಡಸಾಲಿ ಮುಂತಾದ ಪ್ರಮುಖರು ಸೇರಿದಂತೆ ೬೦೦ ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಹೋರಾಟದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿ, ಆಶಾಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ ಕಳಿಸಿಕೊಡಲಾಗುವುದು. ಕೆಲಸಕ್ಕೆ ಹಾಜರಾಗಲು ಆಶಾಗಳಿಗೆ ವಿನಂತಿಸಿಕೊಂಡರು. ಈ ಹಿನ್ನೆಲೆಯಲ್ಲಿ ಆಶಾಗಳು ತಮ್ಮ ಹೋರಾಟವನ್ನು ಕೈಬಿಟ್ಟರು.
ಮೂರು ದಿನಗಳ ಆಶಾಗಳ ಹೋರಾಟ ಅಂತ್ಯ
