ಸಪ್ತಸಾಗರ ವಾರ್ತೆ,ವಿಜಯಪುರ, ಜು. 2: ಪ್ರಪಂಚದಲ್ಲಿಯೇ ಭಾರತೀಯರು ಮಾತನಾಡುವ ಇಂಗ್ಲೀಷ್ ಭಾಷೆ ಪರಿಪೂರ್ಣ ಹಾಗೂ ಪರಿಶುದ್ಧವಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥರು ಹಾಗೂ ಮೌಲ್ಯಮಾಪನ ಉಪಕುಲಸಚಿ ಡಾ. ದೀಪಕ ಶಿಂಧೆ ಹೇಳಿದರು.
ನಗರದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ವ್ಯವಹಾರ ಅಧ್ಯಯನ (ಬಿಬಿಎ) ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ‘ಇಂಗ್ಲೀಷ್ ವ್ಯಾಕರಣ ಶಾಲೆ’ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂಗ್ಲೀಷ್ ಇಂದು ಅಂತರರಾಷ್ಟ್ರೀಯ ಭಾಷೆಯಾಗಿದ್ದು, ಶಿಕ್ಷಣ, ಉದ್ಯೋಗ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಅದರ ಬಳಕೆ ಹೆಚ್ಚಾಗಿದೆ ಎಂದು ಹೇಳಿದರು.
ಕನ್ನಡ, ಉರ್ದು, ಮರಾಠಿ ಸೇರಿದಂತೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳಿಗಿಂತಲೂ ಉತ್ತಮ ಸಾಧನೆ ಮಾಡಬಹುದು ಎಂದು ತಿಳಿಸಿದ ಅವರು, ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆ ಹಾಗೂ ಹಿಂಜರಿಕೆಯನ್ನು ತೊರೆದು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿದಿನ ಇಂಗ್ಲೀಷ್ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವುದು, ಬರೆಯುವ ಅಭ್ಯಾಸ ಮಾಡುವುದು, ಉಪನ್ಯಾಸಗಳು ಹಾಗೂ ಸುದ್ದಿಗಳನ್ನು ಆಲಿಸುವುದರಿಂದ ಭಾಷಾ ಜ್ಞಾನ ಮತ್ತು ವ್ಯಾಕರಣ ಕೌಶಲ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ಪ್ರೊ. ಮನೋಜ್ ಕೊಟ್ನಿಸ್ ಹಾಗೂ ಪ್ರೊ. ಸುಜಾತಾ ಕಟ್ಟಿಮನಿ ಇಂಗ್ಲೀಷ್ ಭಾಷೆಯ ಮಹತ್ವವನ್ನು ವಿವರಿಸಿದರು.
ಸಿಕ್ಯಾಬ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎ.ಎಸ್. ಪಾಟೀಲ ಮಾತನಾಡಿ, ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ಇಂಗ್ಲೀಷ್ ಭಾಷೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳ ಭಾಷಾ ಕೌಶಲ್ಯ ವೃದ್ಧಿಗೆ ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಿಕ್ಯಾಬ್ ಸಂಸ್ಥೆಯ ಅಧ್ಯಕ್ಷ ಎಸ್.ಎಸ್. ಪುಣೇಕರ ಮಾತನಾಡಿ, ಪರಿಣಾಮಕಾರಿ ಸಂವಹನವೇ ವ್ಯಕ್ತಿಯ ಯಶಸ್ಸಿನ ಪ್ರಮುಖ ಸಾಧನವಾಗಿದ್ದು, ಭಾಷಾ ಕೌಶಲ್ಯ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗುತ್ತದೆ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕಿ ಪ್ರೊ. ಪದ್ಮಾ ಅಲಬಾಳ, ಪ್ರಾಚಾರ್ಯ ಡಾ. ಎಚ್.ಕೆ. ಯಡಹಳ್ಳಿ ಹಾಗೂ ಸಿಕ್ಯಾಬ್ ಪಿಯು ಕಾಲೇಜುಗಳ ಡೀನ್ ಪ್ರೊ. ಎನ್.ಎಸ್. ಭೂಸನೂರ ಉಪಸ್ಥಿತರಿದ್ದರು.
‘ಇಂಗ್ಲೀಷ್ ವ್ಯಾಕರಣ ಶಾಲೆ’ ತರಬೇತಿ ಯೋಜನೆಯ ರೂಪುರೇಷೆಗಳನ್ನು ಪ್ರೊ. ಬಸವರಾಜ ಥೋರಟ್ ಹಾಗೂ ಪ್ರೊ. ವಿದ್ಯಾವತಿ ಬೆಣ್ಣೂರ ವಿವರಿಸಿದರು. ಪ್ರೊ. ನಾಜಿಮಾ ಪಠಾಣ ಸ್ವಾಗತಿಸಿದರು. ಪ್ರೊ. ಶಬೀನಾ ಪಟೇಲ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಸುಶ್ಮಿತಾ ಆಕಾಶಿ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ವಹೀದ್ ನದಾಫ್ ಪವಿತ್ರ ಕುರಾನ್ ಪಠಿಸಿದರು. ಕು. ನಿವೇದಿತಾ ಪಾಟೀಲ ಭಗವದ್ಗೀತೆ ಹಾಗೂ ಕು. ಸುಮಯ್ಯಾ ಶೇಖ್ ಬಸವಣ್ಣನವರ ವಚನ ಗಾಯನ ಪ್ರಸ್ತುತಪಡಿಸಿದರು. ಕೊನೆಯಲ್ಲಿ ಪ್ರೊ. ಅಬ್ದುಲ್ ರಜಾಕ್ ಅರಳಿಮಟ್ಟಿ ವಂದಿಸಿದರು.
ಇಂಗ್ಲೀಷ್ ವ್ಯಾಕರಣ ಶಾಲೆಗೆ ಚಾಲನೆ: ಗ್ರಾಮೀಣ ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಲಿ – ಡಾ. ದೀಪಕ ಶಿಂಧೆ


