ಸಪ್ತಸಾಗರ ವಾರ್ತೆ | ಬೆಂಗಳೂರು. ಆ.10:
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬಡ ಫಲಾನುಭವಿಗಳಿಗೆ ದೊರೆಯಬೇಕಾದ ಸಬ್ಸಿಡಿ ಸಿಲಿಂಡರ್ಗಳನ್ನೇ ದುರ್ಬಳಕೆ ಮಾಡಿಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಭಾರತ್ ಪೆಟ್ರೋಲಿಯಂ (BPCL) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ (HPCL)ಗೆ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗಳಲ್ಲಿ ಉಜ್ವಲ ಯೋಜನೆಯ ಸಿಲಿಂಡರ್ಗಳ ಅಕ್ರಮ ಬಳಕೆ, ನಿಯಮಬಾಹಿರ ಮಾರಾಟ, ನಿಗದಿತ ಮಿತಿಗಿಂತ ಹೆಚ್ಚಿನ ಪೂರೈಕೆ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆ ನಡೆಯುತ್ತಿದೆ ಎಂದು ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ ಇಲಾಖೆ ಗಮನಕ್ಕೆ ತಂದಿದೆ.
ಫಲಾನುಭವಿಗಳ ಪಾಸ್ಬುಕ್ ಏಜೆನ್ಸಿಗಳ ವಶಕ್ಕೆ?
ಕೆಲವು ಗ್ಯಾಸ್ ಏಜೆನ್ಸಿಗಳು ಬಡ ಹಾಗೂ ಅರ್ಹ ಫಲಾನುಭವಿಗಳ ಪಾಸ್ಬುಕ್ಗಳನ್ನು ತಮ್ಮ ವಶದಲ್ಲಿಟ್ಟುಕೊಂಡು, ಗ್ರಾಹಕರ ಗಮನಕ್ಕೆ ಬಾರದಂತೆ ಅವರ ಹೆಸರಿನಲ್ಲಿ ಸಿಲಿಂಡರ್ ಬುಕ್ ಮಾಡುತ್ತಿವೆ. ಬಳಿಕ ಸಿಲಿಂಡರ್ಗಳನ್ನು ಹೆಚ್ಚಿನ ಬೆಲೆಗೆ ಇತರರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇಂತಹ ಅಕ್ರಮದಿಂದ ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಸಬ್ಸಿಡಿ ಸೌಲಭ್ಯ ಕೈತಪ್ಪುವ ಅಪಾಯವಿದ್ದು, ಗ್ರಾಹಕರ ಹೆಸರಿನಲ್ಲಿ ನಡೆಯುತ್ತಿರುವ ಬುಕ್ಕಿಂಗ್ ಮತ್ತು ವಿತರಣೆಯ ಸಂಪೂರ್ಣ ದಾಖಲೆ ಪರಿಶೀಲಿಸುವಂತೆ ಒತ್ತಾಯಿಸಲಾಗಿದೆ.
ನಿಗದಿತ ಮಿತಿ ಮೀರಿ ಸಿಲಿಂಡರ್ ಪೂರೈಕೆ
ಪ್ರದೇಶದ ಜನಸಂಖ್ಯೆ ಆಧರಿಸಿ ಮಾಸಿಕ ರಿಫಿಲ್ ಪೂರೈಕೆಗೆ ನಿಗದಿಪಡಿಸಿರುವ ಮಿತಿಯನ್ನು ಕೆಲವು ಏಜೆನ್ಸಿಗಳು ಉಲ್ಲಂಘಿಸಿ ಹೆಚ್ಚುವರಿ ಸಿಲಿಂಡರ್ಗಳನ್ನು ದಾಸ್ತಾನು ಮಾಡಿ ವಿತರಿಸುತ್ತಿವೆ ಎಂಬ ಆರೋಪವೂ ಇದೆ.
ಅದೇ ರೀತಿ, ಏಜೆನ್ಸಿಗಳಿಗೆ ನಿಗದಿಪಡಿಸಿರುವ ವಿತರಣಾ ವ್ಯಾಪ್ತಿಯನ್ನು ಮೀರಿ 30ರಿಂದ 40 ಕಿ.ಮೀ. ದೂರದವರೆಗೂ ಸಿಲಿಂಡರ್ಗಳನ್ನು ಸಾಗಿಸಲಾಗುತ್ತಿದೆ ಎಂಬ ದೂರಿನ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ.
ಅಕ್ರಮ ದಾಸ್ತಾನು: ಅಪಾಯದ ಗಂಟೆ
PESO ಹಾಗೂ ತೈಲ ಕಂಪನಿಗಳು ನಿಗದಿಪಡಿಸಿರುವ ಪರವಾನಗಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಿಲಿಂಡರ್ಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ರಸ್ತೆಬದಿ ಹಾಗೂ ಅಕ್ರಮ ಶೆಡ್ಗಳಲ್ಲಿ ತುಂಬಿದ ಮತ್ತು ಖಾಲಿ ಸಿಲಿಂಡರ್ಗಳನ್ನು ಸಂಗ್ರಹಿಸುವುದು ಸಾರ್ವಜನಿಕರ ಸುರಕ್ಷತೆಗೆ ಗಂಭೀರ ಅಪಾಯ ತಂದೊಡ್ಡುವ ಸಾಧ್ಯತೆಯಿದೆ.
ನಿಗದಿತ ವಿತರಣಾ ವ್ಯಾಪ್ತಿ ಹಾಗೂ ಸುರಕ್ಷತಾ ನಿಯಮ ಉಲ್ಲಂಘನೆಯಿಂದ ಸಿಲಿಂಡರ್ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ವಿಮಾ ಪರಿಹಾರ ಪಡೆಯುವಲ್ಲಿಯೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಎಚ್ಚರಿಸಲಾಗಿದೆ.
ದಿಢೀರ್ ತಪಾಸಣೆಗೆ ಆಗ್ರಹ
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ವಲಯ ಮತ್ತು ಜಿಲ್ಲಾ ಜಂಟಿ/ಉಪ ನಿರ್ದೇಶಕರು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಇಲಾಖೆಗೆ ಹಾಗೂ ಅರ್ಜಿದಾರರಿಗೆ ವರದಿ ಸಲ್ಲಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚಿಸಿದೆ.
ಗ್ರಾಹಕರ ಪಾಸ್ಬುಕ್ ಬಳಸಿ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಏಜೆನ್ಸಿಗಳ ಪರವಾನಗಿ ರದ್ದುಗೊಳಿಸಬೇಕು. ಗ್ಯಾಸ್ ಗೋದಾಮುಗಳ ಮೇಲೆ ದಿಢೀರ್ ತಪಾಸಣೆ ನಡೆಸಿ, ದಾಸ್ತಾನು, ಬುಕ್ಕಿಂಗ್ ಮತ್ತು ವಿತರಣಾ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ನ ವಲಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅರುಣ್ ಎಂ. ಆಗ್ರಹಿಸಿದ್ದಾರೆ.


