ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 12:
ಪರಿಸರ ರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬರ ಹೊಣೆಯಾಗಿದ್ದು, ಪ್ರತಿಯೊಬ್ಬರು ಸಸಿಯನ್ನು ನೆಟ್ಟು, ಪೋಷಣೆ ಮಾಡಿ, ಪರಿಸರ ಸಂರಕ್ಷಣೆ ಮಾಡಬೇಕೆಂದು ಕೃಷಿ ಮಹಾವಿದ್ಯಾಲಯ ನಿವೃತ್ತ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ನಗರದ ಸುಲ್ತಾನ ಡೈಮಂಡ್ಸ್ ಅಂಡ್ ಗೋಲ್ಡ್ ಶೋರೂಮ್ ವತಿಯಿಂದ ಹಮ್ಮಿಕೊಂಡ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪರಿಸರ ಸಂರಕ್ಷಣೆ ಮತ್ತು ವಿನಾಶ ಮನುಕುಲದಿಂದ ಮಾತ್ರ ಸಾಧ್ಯ. ಇಂದು ಗಿಡ ಮರಗಳ ಕಟಾವಿನಿಂದ ಪರಿಸರ ಹಾಳಾಗುತ್ತಿದೆ. ಇದರ ಪರಿಣಾಮವಾಗಿ ಬಿರುಬಿಸಿಲು, ಬಿರುಗಾಳಿ, ಮಹಾಮಳೆ, ಬರಗಾಲ, ಜಲಪ್ರಳಯ, ಅಕಾಲಿಕ ಮಳೆಗಳು ಸರ್ವೇ ಸಾಮಾನ್ಯವಾಗಿವೆ. ಇದನ್ನು ತಡೆಯಲು ಪ್ರತಿಯೊಬ್ಬರು ವಾತಾವರಣವನ್ನು ಶುದ್ಧವಾಗಿವಾಗಿಡಬೇಕಾಗಿದೆ ಎಂದರು. ಮುಖ್ಯ ಅತಿಥಿ ದೆಹಲಿಯ ಮಕ್ಕಳ ಕಲ್ಯಾಣ ಸಂಘದ ಸದಸ್ಯೆ ಡಾ. ವನಿತಾ ತೊರವಿ ಮಾತನಾಡಿ, ಇಂದು ನಾವು ವಾತಾವರಣದಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪರಿಸರ ಎಷ್ಟೊಂದು ಹಾಳಾಗಿದೆ ಎಂಬುದು ಗೊತ್ತಾಗುತ್ತದೆ. ಇದಕ್ಕಾಗಿ ನಾವು ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಸರ ಪ್ರಜ್ಞೆ ಬೆಳೆಸಬೇಕು. ಅವರ ಹುಟ್ಟುಹಬ್ಬವನ್ನು ಸಸಿಯನ್ನು ನೆಟ್ಟು, ಅದನ್ನು ಕಾಳಜಿಯಿಂದ ಬೆಳೆಯುವಂತೆ ನೋಡಿಕೊಳ್ಳಬೇಕು ಎಂದರು.
ಇಂಡಿ ಅರಣ್ಯ ಇಲಾಖೆಯ ಎಂ.ಬಿ. ಮುಜಗೊಂಡ ಮಾತನಾಡಿ, ಅರಣ್ಯ ಇಲಾಖೆ ಪ್ರತಿ ವರ್ಷ ಲಕ್ಷಾಂತರ ಸಸಿಗಳನ್ನು ಬೆಳೆಸಿ, ಅವುಗಳನ್ನು ವಿತರಿಸಿ, ಅರಣ್ಯ ಸಂಪತ್ತನ್ನು ಬೆಳೆಸಲು ಮತ್ತು ಪರಿಸರ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ ಎಂದರು.
ರಜನಿ ಇಂಡಸ್ಟ್ರೀಸ್ ನಿರ್ದೇಶಕಿ ರಜನಿ ಸಂಬಣ್ಣಿ ಮಾತನಾಡಿ, ಇಂಥ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಜನಜಾಗೃತಿಯನ್ನು ಮೂಡಿಸಲಾಗುತ್ತಿದೆ. ಇದರಲ್ಲಿ ಸಮುದಾಯ ಪಾಲ್ಗೊಳ್ಳುವಿಕೆ ಬಹಳ ಮುಖ್ಯವಾಗಿದೆ. ನಾವೆಲ್ಲರೂ ಪರಿಸರ ಸಂರಕ್ಷಣೆಯ ರಾಯಭಾರಿಗಳಾಗಬೇಕೆಂದು ಹೇಳಿದರು. ಸುಲ್ತಾನ್ ಡೈಮಂಡ್ಸ್ ಮಾರುಕಟ್ಟೆ ವ್ಯವಸ್ಥಾಪಕ ಅಬ್ದುಲ್ ಅಜೀಜ್ ಖತೀಬ್ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಸರ ದಿನಾಚರಣೆ ಕಾರ್ಯಕ್ರಮ ಹಸಿರು ಮತ್ತು ಆರೋಗ್ಯಕರ ಭವಿಷ್ಯವನ್ನು ಸೃಷ್ಟಿಸುವ ಅರ್ಥಪೂರ್ಣ ಹೆಜ್ಜೆಯಾಗಿದೆ. ನಮ್ಮ ಸಂಸ್ಥೆಯು ಕೇವಲ ಆಭರಣಗಳನ್ನು ಮಾರಾಟ ಮಾಡದೆ, ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಕುರಿತು ಅರಿವು, ತಿಳಿವಳಿಕೆ ಮೂಡಿಸಲಾಗುತ್ತಿದೆ. ಈ ವರ್ಷ ನಮ್ಮ ಸಂಸ್ಥೆಯಿಂದ ಸಸಿಗಳನ್ನು ಪಿಡಬ್ಲ್ಯೂಡಿ, ನೀರು ಸರಬರಾಜು ಮಂಡಳಿ, ರೈಲ್ವೆ ಇಲಾಖೆ, ಹೆಸ್ಕಾಂ ಮತ್ತು ಇತರ ಸಾರ್ವಜನಿಕ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಸಿ ನೆಡುವ ಅಭಿಯಾನವನ್ನು ನಡೆಸಲಾಯಿತು. ನಮ್ಮ ಕಂಪನಿಯು ಪರಿಸರ ಸಂರಕ್ಷಣೆಯನ್ನು ಅತ್ಯಂತ ಬದ್ಧತೆಯಿಂದ ಮತ್ತು ಉತ್ಸಾಹದಿಂದ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಲಯ ವ್ಯವಸ್ಥಾಪಕ ಕಾಶಿನಾಥ, ಕಂಪನಿಯ ಉದ್ಯೋಗಿಗಳು, ಗ್ರಾಹಕರು, ಆಮಂತ್ರಿತರು ಉಪಸ್ಥಿತರಿದ್ದರು.
ಪ್ರತಿಯೊಬ್ಬರು ಸಸಿಯನ್ನು ನೆಟ್ಟು ಪರಿಸರ ಸಂರಕ್ಷಿಸಿ- ಡಾ. ರವೀಂದ್ರ ಬೆಳ್ಳಿ


