ಜಿಲ್ಲೆಯ ದಕ್ಷಿಣ ಭಾಗದ ಜನರಿಗೂ ಅತ್ಯುತ್ತಮ ಆರೋಗ್ಯ ಸೇವೆ‌: ಡಾ. ಹೊನ್ನುಟಗಿ

ಸಪ್ತಸಾಗರ ವಾರ್ತೆ ವಿಜಯಪುರ, ಅ. 17: ಬಿ.ಎಲ್.ಡಿ.ಇ‌ ಆಸ್ಪತ್ರೆ ನಗರ ಆರೋಗ್ಯ ಕೇಂದ್ರ ಸ್ಥಾಪಿಸುವ ಮೂಲಕ‌ ನಗರದ ದಕ್ಷಿಣ ಭಾಗದ ಜನರಿಗೂ ಅತ್ಯುತ್ತಮ ಆರೋಗ್ಯ ಸೇವೆ‌ ಒದಗಿಸುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ‌ ಡಾ. ರಾಜೇಶ ಹೊನ್ನುಟಗಿ‌ ತಿಳಿಸಿದ್ದಾರೆ.
ಶುಕ್ರವಾರ ನಗರದ ಸರಕಾರಿ ಪಾಲಿಟೆಕ್ನಿಕ್ ಹಿಂಭಾದಲ್ಲಿರುವ ಬಿ.ಎಲ್.ಡಿ.ಇ ಆಯುರ್ವೇದ ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಅಲೋಪಥಿ ಮತ್ತು ಆಯುರ್ವೇದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ‌ ಮತ್ತು ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಅವರ ಆಶಯದಂತೆ ಆಯುರ್ವೇದ ಕಾಲೇಜಿನ‌ಆವರಣದಲ್ಲಿ ನಗರ ಆರೋಗ್ಯ ಕೇಂದ್ರ ಪ್ರಾರಂಭಿಸಿದೆ. ಮುಖ್ಯ ಆಸ್ಪತ್ರೆಯ ಮಾದರಿಯಲ್ಲಿಯೇ ಇಲ್ಲಿಯೂ ಅತ್ಯುತ್ತಮ ಆರೋಗ್ಯ ಸೇವೆಗಳ ಸೌಲಭ್ಯವಿದೆ. ಹೆಚ್ಚುವರಿ ಸೇವೆಗಳಿಗೆ ಮುಖ್ಯ ಆಸ್ಪತ್ರೆಗೂ ಶಿಫಾರಸು ಮಾಡಲಾಗುತ್ತದೆ. ಈ ಭಾಗದ ಜನರಿಗೆ ಇದರಿಂದ ಸಾಕಷ್ಟು‌ ಅನುಕೂಲವಾಗಿದೆ ಎಂದು‌ ಹೇಳಿದರು.
ಬಿ.ಎಲ್.ಡಿ.ಇ ಹೈಟೆಕ್ ಆಯುರ್ವೇದ ಆಸ್ಪತ್ರೆ ಮತ್ತು ನಗರ ಆರೋಗ್ಯ‌ ಕೇಂದ್ರದ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಮಾತನಾಡಿ, ಆಯುರ್ವೇದ ಆಸ್ಪತ್ರೆ ದೇಶ- ವಿದೇಶಗಳಲ್ಲಿಯೂ ಖ್ಯಾತಿ ಹೊಂದಿದೆ. ವಿದೇಶಿಗರು ಇಲ್ಲಿಗೆ ಚಿಕಿತ್ಸೆಗೆ ಆಗಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಆಯುರ್ವೇದ ಮತ್ತು‌ ಅಲೋಪಥಿ ಎರಡೂ ಸಮನ್ವಯ ಆರೋಗ್ಯ ಸೇವೆಗಳ ಮೊದಲ‌ ಶಿಬಿರ ಇದಾಗಿದೆ. ಇನ್ನು ಮುಂದೆ ಪ್ರತಿ‌ ತಿಂಗಳು ಸಮನ್ವಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಆಯುರ್ವೇದ ಕಾಲೇಜಿನ‌ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾತನಾಡಿ, ಒಂದೇ ಸೂರಿನಡಿ‌ ಆಯುರ್ವೇದ ಮತ್ತು‌ ಅಲೋಪಥಿ ಆರೋಗ್ಯ ಸೇವೆಗಳು‌ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಡೆದ ಈ‌ ಶಿಬಿರದಲ್ಲಿ ಅಲೋಪಥಿ ವಿಭಾಗದಲ್ಲಿ 232 ಮತ್ತು ಆಯುರ್ವೇದ ವಿಭಾಗದಲ್ಲಿ 215 ಸೇರಿದಂತೆ ಸುಮಾರು 450ಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ‌ ಸಂದರ್ಭದಲ್ಲಿ ಅಲೋಪಥಿ ವೈದ್ಯರಾದ‌ ಡಾ. ಅನುಜಾ ಎಂ. ಕೆ., ಡಾ. ಭುವನೇಶ್ವರಿ ಜಿ., ಡಾ. ಎನ್. ಎಸ್. ದೇಶಮುಖ, ಡಾ. ತಿರುಮಲ ಕುಲಕರ್ಣಿ, ಡಾ. ಸಾಹೇಬಗೌಡ ಪಾಟೀಲ, ಡಾ. ಏಕ್ತಾ ಸಿ., ಆಯುರ್ವೇದ ವೈದ್ಯರಾದ ಡಾ. ಜಾವೇದ ಬಾಗಾಯತ, ಡಾ. ಅನಿಸುರ ರೆಹಮಾನ ಮದನಿ, ಡಾ. ಪಿ. ಜಿ. ಗಣ್ಣೂರ, ಡಾ. ಉಮಾ ಪಾಟೀಲ, ಡಾ. ಮಲ್ಲಮ್ಮ ಬಿರಾದಾರ, ಡಾ. ವಿಜಯಲಕ್ಷ್ಮಿ ಹಾದಿಮನಿ, ಡಾ. ವಿಜಯಲಕ್ಷ್ಮಿ ಬೆನಕಟ್ಟಿ, ಡಾ. ರವಿ ರಜಪೂರ, ಡಾ. ರಾಜೆಸಾಬ ಕಬಾಡೆ, ಡಾ. ಮಾನಸಾ ಪಂಚಾಕ್ಷರಿಮಠ, ಡಾ. ಸೀತಾ ಬಿರಾದಾರ, ಡಾ. ನಂದಿತಾ ಕುಲಕರ್ಣಿ, ಡಾ. ಕವಿತಾ ಚವ್ಹಾಣ, ಆಸ್ಪತ್ರೆಯ ಸಹಾಯಕ‌ ಆಡಳಿತಾಧಿಕಾರಿ ಏಕನಾಥ ಜಾಧವ, ಸಿಬ್ಬಂದಿಯಾದ ದೀಪಕ ಔರಂಗಾಬಾದ, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

Share this