ಸಪ್ತಸಾಗರ ವಾರ್ತೆ, ವಿಜಯಪುರ,ಅ.21:
ಖ್ಯಾತ ಹಿಂದುಸ್ಥಾನಿ ಸಂಗೀತಗಾರ ವಿಜಯಪುರ ಮೂಲದ ಸಂಜೀವ ಜಹಾಗೀರದಾರ(65) ದಿ.20ರಂದು ಬೆಳಿಗ್ಗೆ ಮಹಾರಾಷ್ಟ್ರದ ಪುಣೆ ಪಟ್ಟಣದ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ ಪತ್ನಿ ಪುಣೆ ಮಹಾನಗರದ ನ್ಯಾಯಾಲಯದ ನ್ಯಾಯವಾದಿ ರಾಜಲಕ್ಷ್ಮಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವಿದೆ.
ಮೂಲತ: ಅವಿಭಜಿತ ವಿಜಯಪುರ ಜಿಲ್ಲೆಯ ಇಲಕಲ್ಲ ಸಮೀಪದ ಬಲಕುಂದಿ ಗ್ರಾಮದವರಾಗಿದ್ದ ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗೋಡಬೋಲೆ ಮಾಳಾದಲ್ಲಿರುವ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪ್ರತಿಷ್ಠಿತ ಪಿ ಡಿ ಜೆ ಹೈಸ್ಕೂಲಿನಲ್ಲಿ ಮುಗಿಸಿ ಇಂಜಿನೀಯರಿಂಗ್ ಅಧ್ಯಯನವನ್ನು ಕಲಬುರ್ಗಿಯಲ್ಲಿ ಪೂರೈಸಿದರು.
ಚಿಕ್ಕಂದಿನಿಂದಲೂ ಸಂಗೀತದ ಪರಂಪರೆಯಲ್ಲಿ ಬೆಳೆದಿದ್ದ ಇವರು ಮನೆಯಲ್ಲಿ ಪ್ರತಿ ಗುರುವಾರ ಭಜನೆ ಕಾರ್ಯಕ್ರಮ ನಡೆಯುತ್ತಿತ್ತು. ಹೀಗಾಗಿ ಇವರ ಮನೆತನಕ್ಕೆ ಭಜನಿ ಜಹಗಿರದಾರ ಎಂಬು ಹೆಸರು ಬಂದಿತ್ತು. ಆದಾಗ್ಯೂ ಇವರು ವಿಜಯಪುರದ ಖ್ಯಾತ ಸಂಗೀತ ಶಿಕ್ಷಕ ದಿವಂಗತ ಕೇಶವರಾವ ಥಿಟೆ ಅವರಲ್ಲಿ ಪ್ರಾಥಮಿಕ ಹಂತದಲ್ಲಿ ಸಂಗಿತವನ್ನು ಕಲಿತರು.
ಇಂಜಿನೀಯರಿಂಗ್ ಪದವಿ ಮುಗಿಸಿದ ಬಳಿಕ ಪುಣೆ ಮಹಾನಗರಕ್ಕೆ ನೌಕರಿ ಅರಸುತ್ತ ತೆರಳಿದಾಗ ಅಲ್ಲಿ ಸಂಗೀತ ದಿಗ್ಗಜ ಪಂಡಿತ ಭೀಮಸೇನ ಜೋಶಿ ಅವರಲ್ಲಿ ಸಂಗೀತ ಶಿಕ್ಷಣವನ್ನು ಮುಂದುವರೆಸಲು ಇಚ್ಛಿಸಿದಾಗ ಗುರುಗಳ ಆದೇಶದಂತೆ ಸಂಗೀತ ಕ್ಷೇತ್ರವನ್ನೇ ಆಯ್ದುಕೊಂಡು ಅದನ್ನೆ ತಮ್ಮ ಉಸಿರನ್ನಾಗಿಸಿಕೊಂಡರು. ಭೀಮಸೇನ ಜೋಶಿ ಅವರ ಮನೆಯಲ್ಲಿ ಇದ್ದುಕೊಂಡು 12 ವರ್ಷಗಳ ಕಾಲ ಸಂಗೀತವನ್ನು ಗುರುಶಿಷ್ಯ ಪರಂಪರೆಯನ್ನು ಮುಂದುವರೆಸಿದರು.
ಕಳೆದ ನಾಲ್ಕು ದಶಕಗಳ ಕಾಲ ದೇಶದ ಉದ್ದಗಲಕ್ಕೂ ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರದ ಮೂಲೆ ಮೂಲೆಗಳಲ್ಲಿ ಸಂಗೀತದ ಕಾರ್ಯಕ್ರಮಗಳನ್ನು ನೀಡುವ ಮೂಲಕ ಖ್ಯಾತಿ ಗಳಿಸಿದ್ದರು.
1985 ರಲ್ಲಿ ನವರಸಪುರ ಸಂಗೀತೋತ್ಸವದಲ್ಲಿ ಸಂಜೀವ ಜಹಾಗೀರದಾರ ತಮ್ಮ ಸಂಗೀತ ಕಾರ್ಯಕ್ರಮ ನೀಡಿದ್ದುಂಟು.
ಖ್ಯಾತ ಹಿಂದುಸ್ಥಾನಿ ಸಂಗೀತಗಾರ ಸಂಜೀವ ಜಹಾಗೀರದಾರ ಇನ್ನಿಲ್ಲ


