ರೈತ ಸಂಘದ ಅನಿರ್ದಿಷ್ಟ ಹೋರಾಟ ಎರಡನೇ ದಿನಕ್ಕೆ; ಎಕರೆಗೆ ₹50 ಸಾವಿರ ಪರಿಹಾರಕ್ಕೆ ಒತ್ತಾಯ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 3:
ಜಿಲ್ಲೆಯಲ್ಲಿ 2026-27ನೇ ಸಾಲಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಡೆಸುತ್ತಿರುವ ಅನಿರ್ದಿಷ್ಟ ಹೋರಾಟ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿತು.
ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ಮುಖಂಡ ಅಣ್ಣರಾಯ ಈಳಗೇರ್ ಮಾತನಾಡಿ, ವಿಜಯಪುರ ಜಿಲ್ಲೆಗೆ ಬರಗಾಲ ಎನ್ನುವುದು ನಿರಂತರವಾಗಿ ಎದುರಾಗುತ್ತಿರುವ ಸಮಸ್ಯೆಯಾಗಿದೆ. 1927ರಲ್ಲಿ ಬ್ರಿಟಿಷ್ ಅಧಿಕಾರಿಗಳು ಜಿಲ್ಲೆಯ ಬರ ಪರಿಸ್ಥಿತಿಯನ್ನು ಗಮನಿಸಿ ₹40 ಸಾವಿರ ವೆಚ್ಚದಲ್ಲಿ ಬರಗಾಲ ನಿವಾರಣಾ ಕೇಂದ್ರ ಸ್ಥಾಪಿಸಿ, ಹಲವು ಕ್ರಮಗಳನ್ನು ಕೈಗೊಂಡಿದ್ದರು. ಅಲ್ಲದೆ, 1,800 ರೈತರನ್ನು ಒಗ್ಗೂಡಿಸಿ ಬರ ನಿರ್ವಹಣಾ ಸಹಕಾರ ಸಂಘ ರಚಿಸಿದ್ದರು ಎಂದು ಹೇಳಿದರು.
ಕಳೆದ ನೂರು ವರ್ಷಗಳಲ್ಲಿಯೂ ಜಿಲ್ಲೆಯಲ್ಲಿ ಒಣ ಹಾಗೂ ಹಸಿ ಬರದ ಪರಿಸ್ಥಿತಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಬರದ ಕುರಿತು ಸಮಗ್ರ ಅಧ್ಯಯನ ನಡೆಸಿ ವಿಜಯಪುರವನ್ನು ಸಂಪೂರ್ಣ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಮುಖಂಡರಾದ ಸುರೇಖಾ ರಜಪೂತ, ಶ್ರೀಶೈಲ ಮುಳಜಿ, ಬಸವರಾಜ ಹಂದ್ರಾಳ, ಸುರೇಶ, ನರೇಂದ್ರಬಾಬು ಬರಡ್ಡಿ ಹಾಗೂ ರವಿ ಬರಡ್ಡಿ ಮಾತನಾಡಿ, ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಬೇಕು, ಪ್ರತಿ ಎಕರೆಗೆ ₹50 ಸಾವಿರ ಬರ ಪರಿಹಾರ ನೀಡಬೇಕು, ಬೆಳೆ ವಿಮೆ ಪಾವತಿಸಿರುವ ರೈತರಿಗೆ ಶೇ.50ರಷ್ಟು ಮಧ್ಯಂತರ ವಿಮಾ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಎಲ್ಲ ಹಳ್ಳ, ಕೊಳ್ಳ, ಕೆರೆ ಹಾಗೂ ಕಾಲುವೆಗಳನ್ನು ತುಂಬಿಸಬೇಕು. ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವಿನ ವ್ಯವಸ್ಥೆ ಮಾಡಬೇಕು. ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಮುಖಂಡರಾದ ರಾಮನಗೌಡ ಪಾಟೀಲ, ಮಹಾದೇವ ಬನಸೋಡೆ, ಮಲ್ಲಿಕಾರ್ಜುನ ಕೆಂಗನಾಳ, ಈರಪ್ಪ ಕುಳೆಕುಮಟಗಿ, ಶಿವಾನಂದ ಹಿರೇಮಠ, ವಸಂತ ಭೈರಮಾಡಿ, ಗೇನಪ್ಪ ಬಿರಾದಾರ, ಚಂದ್ರಶೇಖರಯ್ಯ ಹಿರೇಮಠ, ಮುತ್ತು ನಾದ, ಶಂಕರಗೌಡ ಬಿರಾದಾರ, ಗಂಗಾಧರ ಬಡಿಗೇರ್, ಕಲ್ಲಪ್ಪ ಪಾರಶೆಟ್ಟಿ, ಸಿದ್ದರಾಮ ಕುಳೆಕುಮಟಗಿ ಸೇರಿದಂತೆ ನೂರಾರು ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

Share this