ಸರ್ಕಾರದ ಆರ್ಥಿಕ ಸ್ಥಿತಿಗೆ ಶ್ವೇತಪತ್ರ ಹೊರಡಿಸಲು ರೈತ ಸಂಘ ಆಗ್ರಹ
ಸಪ್ತಸಾಗರ ವಾರ್ತೆ,ವಿಜಯಪುರ, ಅ.1: ರಾಜ್ಯದ ರೈತರ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಿ, ಪ್ರತಿ ಎಕರೆಗೆ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕು. ₹2,500 ಇನ್ಪುಟ್ ಸಬ್ಸಿಡಿ ನೀಡುವ ಮೂಲಕ ರೈತರನ್ನು ಅವಮಾನಿಸಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
ರೈತರು ಬೀಜ, ಗೊಬ್ಬರ, ಕೂಲಿ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಮಾಡಿರುವ ಸಂಪೂರ್ಣ ವೆಚ್ಚವನ್ನು ಪರಿಗಣಿಸಿ ವೈಜ್ಞಾನಿಕವಾಗಿ ಪರಿಹಾರ ನಿಗದಿಪಡಿಸಬೇಕು ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಒತ್ತಾಯಿಸಿದರು.
ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಹೇಳಲಾಗುತ್ತಿದ್ದರೆ ಅದರ ವಾಸ್ತವ ಸ್ಥಿತಿಯನ್ನು ಜನರ ಮುಂದಿಡಲು ಶ್ವೇತಪತ್ರ ಹೊರಡಿಸಬೇಕು. ರೈತರಿಗೆ ಪರಿಹಾರ ನೀಡಲು ಹಣದ ಕೊರತೆಯಿದ್ದರೆ ಸರ್ಕಾರಕ್ಕೆ ನೆರವಾಗುವ ಉದ್ದೇಶದಿಂದಲೇ ರೈತ ಸಂಘದ ವತಿಯಿಂದ ದೇಣಿಗೆ ಸಂಗ್ರಹಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಗುರುವಾರ ಬೆಳಗ್ಗೆ ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಲಾಯಿತು. ನಂತರ ಸಂಘದ ಪದಾಧಿಕಾರಿಗಳು ಲಾಲ್ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ, ಗಾಂಧಿ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತಗಳಲ್ಲಿ ದೇಣಿಗೆ ಸಂಗ್ರಹಿಸಿದರು.
ರೈತರು, ರೈತ ಮಹಿಳೆಯರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ ₹4,025 ಮೊತ್ತದ ಡಿಡಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಅವರಿಗೆ ಸಲ್ಲಿಸಿ, ಸರ್ಕಾರಕ್ಕೆ ರವಾನಿಸುವಂತೆ ಮನವಿ ಮಾಡಲಾಯಿತು.
ರೈತರಿಗೆ ನೀಡುವ ಪರಿಹಾರವು ಜೈಲಿನಲ್ಲಿರುವ ಕೈದಿಗಳಿಗೆ ನೀಡುವ ಕೂಲಿಗಿಂತಲೂ ಕಡಿಮೆ ಇರುವಂತಾಗಬಾರದು. ಅನ್ನದಾತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯಯುತ ಪರಿಹಾರ ನೀಡಬೇಕು ಎಂದು ಕುಲಕರ್ಣಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಪಾಂಡು ಹಟ್ಟಿ, ವಿಠ್ಠಲ ಬಿರಾದಾರ, ರಾಮನಗೌಡ ಹಾದಿಮನಿ, ಗುರುಲಿಂಗಪ್ಪ ಪಡಸಲಗಿ, ಹೊರಕೇರಪ್ಪ ತೆಲಗಿ, ಶೆಟ್ಟಪ್ಪ ಲಮಾಣಿ, ಬಸವರಾಜ ಹೊಸಳ್ಳಿ, ಮಲ್ಲಿಕಾರ್ಜುನ ಬಟಗಿ, ವಿನೋದ ಖೇಡ, ಜಲಾಲ್ ಸಾಬ್ ಮುಲ್ಲಾ, ಸಿದ್ದರಾಮಪ್ಪ ಕಂಬಾರ, ಲಾಯಪ್ಪ ಇಂಗಳೆ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


