ಸಪ್ತಸಾಗರ ವಾರ್ತೆ ವಿಜಯಪುರ, ಡಿ. 9 : ಬೆಳೆ ಹಾನಿ ಪ್ರಮಾಣ ಹೆಚ್ಚಾಗಿದ್ದರೂ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ, ಅಸಮರ್ಪಕ ಹಾಗೂ ಅನ್ಯಾಯಯುತವಾದ ಕ್ರಮಗಳನ್ನು ಅನುಸರಿಸಿರುವುದನ್ನು ಹಾಗೂ ಇನ್ನೂ ಕೆಲ ರೈತರಿಗೆ ಪರಿಹಾರ ಹಣವನ್ನು ಜಮಾ ಮಾಡದೇ ಇರುವುದನ್ನು ಖಂಡಿಸಿ ಬಸವನ ಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದ ರೈತರು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ವ್ಯಾಪಕ ಮಳೆಯಾಗಿದ್ದರ ಪರಿಣಾಮ ಸರ್ಕಾರ ರೈತರಿಗೆ ಬೆಳೆ ಪರಿಹಾರ ಹಣವನ್ನು ಹಾಕಿದೆ. ಆದರೆ ಬಹಳಷ್ಟು ರೈತರಿಗೆ ಪರಿಹಾರವೇ ಜಮೆ ಆಗಿರುವುದಿಲ್ಲ. ಕೆಲ ರೈತರಿಗೆ ಒಟ್ಟು ಪರಿಹಾರ ೨೦೦೦, ಕೆಲವರಿಗೆ ೫೦೦೦ ಹಣ ಜಮಾ ಮಾಡಲಾಗಿದೆ.
ಒಣ ಬೇಸಾಯಕ್ಕೆ ಪ್ರತಿ ಹೆಕ್ಟೆರ್‌ಗೆ 17 ಸಾವಿರ ಹಾಗೂ ನೀರಾವರಿಗೆ 25.5 ಸಾವಿರ ಮತ್ತು ಬಹು ವಾರ್ಷಿಕ ಬೆಳೆಗಳಿಗೆ 31 ಸಾವಿರ ಎಂದು ಸರ್ಕಾರವೇ ನಿಗದಿ ಮಾಡಿದೆ ಆದರೆ ಬಿಡಿಗಾಸು ನೀಡಿ ಕೈ ತೊಳೆದುಕೊಂಡಿರುವುದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಅಧಿಕೃತ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 3.5 ಲಕ್ಷಕ್ಕೂ ಅಧಿಕ ಹೆಕ್ಟೆರ್ ಬೆಳೆ ನಷ್ಟವಾಗಿದೆ. ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದರೂ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆಯಲ್ಲಿ ಅಧಿಕಾರಿಗಳು ಹಾನಿ ಪ್ರಮಾಣವನ್ನು ತಪ್ಪಾಗಿ ನಮೂದು ಮಾಡಿದ್ದಾರೆ. ಅಲ್ಲದೇ ತಮಗೆ ಇಷ್ಟ ಬಂದಂತೆ ಬರೆದುಕೊಂಡಿದ್ದು ಬೆಳೆ ಹಾನಿ ಪರಿಹಾರ ನೀಡುವಲ್ಲಿ ಬಹಳಷ್ಟು ರೈತರಿಗೆ ಅನ್ಯಾಯ ಮಾಡಿದ್ದಾರೆ.
ತಪ್ಪಿತಸ್ಥ ಅಧಿಕಾರಗಳ ವಿರುದ್ಧ ಜಿಲ್ಲಾಡಳಿತ ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಅನ್ಯಾಯಕ್ಕೊಳಗಾಗಿರುವ ರೈತರಿಗೆ ಸರಿಯಾದ ಹಾಗೂ ನ್ಯಾಯಯುತ ಪರಿಹಾರವನ್ನು ಸರ್ಕಾರ ನೀಡಬೇಕು. ಮುಂದಿನ ೧೫ ದಿನಗಳಲ್ಲಿ ಜಿಲ್ಲಾಡಳಿತ ಎಲ್ಲ ರೈತರಿಗೂ ಸೂಕ್ತ ಪರಿಹಾರ ನೀಡಬೇಕು. ಒಂದು ವೇಳೆ ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಶಿವಪ್ಪ ಮರನೂರ ಮಾತನಾಡಿ, ರೈತರ ಹೊಲಗಳಿಗೆ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಫೋಟೋ ತೆಗೆದುಕೊಂಡು ಹೋಗಿದ್ದರೂ ಸಹಿತ ಹಾನಿ ಪ್ರಮಾಣ ಕಡಿಮೆ ದಾಖಲಿಸಿದ್ದಾರೆ. ಇದರಿಂದ ರೈತರಿಗೆ ಬರಬೇಕಾಗಿದ್ದ ನ್ಯಾಯಯುತ ಪರಿಹಾರ ಬಂದಿಲ್ಲ. ಕೂಡಲೇ ಎಲ್ಲ ರೈತರಿಗೂ ಪರಿಹಾರ ಹಣ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತರಾದ ಅಮೃತ ಹಳ್ಳಿ, ಭರಮಪ್ಪ ಮರನೂರ, ಗೋಲಪ್ಪ ಕೆರುಟಗಿ, ಮಲ್ಲಿಕಾರ್ಜುನ ಹೂಗಾರ, ಬಸವರಾಜ ಸಜ್ಜನ, ಭೀಮಪ್ಪ ಕುಬಾಣಿ, ಭೀಮರಾಯ ಅಗಸರ, ಮಹಾದೇವಪ್ಪ ಬನಸೋಡೆ, ಸುರೇಶ ಹಳಕಟ್ಟಿ, ಬಸಪ್ಪ ಕೆರುಟಗಿ, ಸಲೀಂ ಮಾಶ್ಯಾಳ, ಆನಂದ ಪಟೇದ, ಎಸ್.ಎಲ್.ಟಕ್ಕಳಕಿ, ಯಲ್ಲಪ್ಪ ಪಟೇದ, ಮಹಾದೇವ ಬನಸೋಡೆ, ಭೀಮಣ್ಣ ಬಾಗಲಕೋಟ, ಸಲೀಮ್ ಮಾಶ್ಯಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬೆಳೆ ಪರಿಹಾರ ತಾರತಮ್ಯ ಖಂಡಿಸಿ ರೈತರಿಂದ ಆಕ್ರೋಶ


