ಬರಗಾಲ ಘೋಷಣೆಗೆ ಆಗ್ರಹಿಸಿ ರೈತರ ಹೋರಾಟ 5ನೇ ದಿನಕ್ಕೆ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 6: ಜಿಲ್ಲೆಯಲ್ಲಿ 2026-27ನೇ ಸಾಲಿನಲ್ಲಿ ಮಳೆ ಕೊರತೆಯಾಗಿದ್ದರೂ ಕೇವಲ ಮೂರು ತಾಲೂಕುಗಳನ್ನು ಸಂಪೂರ್ಣ ಬರಗಾಲ ಹಾಗೂ ಮೂರು ತಾಲೂಕುಗಳನ್ನು ಮಧ್ಯಮ ಬರಗಾಲವೆಂದು ಘೋಷಿಸಿ, ಉಳಿದ ಏಳು ತಾಲೂಕುಗಳನ್ನು ಕೈಬಿಟ್ಟಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಡೆಸುತ್ತಿರುವ ಅನಿರ್ದಿಷ್ಟ ಹೋರಾಟ ಐದನೇ ದಿನಕ್ಕೆ ಕಾಲಿಟ್ಟಿದೆ.
ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಬಲೇಶ್ವರ ತಾಲೂಕು ಅಧ್ಯಕ್ಷ ಸುರೇಶ ಕಿರಸೂರ ಮಾತನಾಡಿ, “ಜಿಲ್ಲೆಯ 13 ತಾಲೂಕುಗಳನ್ನು ಬರಗಾಲವೆಂದು ಘೋಷಿಸುವವರೆಗೆ ಹೋರಾಟ ಹಿಂಪಡೆಯುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಇಂಡಿ ತಾಲೂಕು ಅಧ್ಯಕ್ಷ ಮಾಳಪ್ಪ ಪೂಜಾರಿ ಮಾತನಾಡಿ, ರೈತರ ಸಂಕಷ್ಟ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಣುತ್ತಿಲ್ಲ. ಸರ್ಕಾರದ ಬಳಿ ಹಣವಿಲ್ಲ ಎಂಬ ಕಾರಣ ನೀಡಲಾಗುತ್ತಿದೆ. ಕೂಡಲೇ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಗಾಲವೆಂದು ಘೋಷಿಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ್, ಮುಖಂಡರಾದ ಮಹಾದೇವ ಬನಸೋಡೆ, ಈರಪ್ಪ ಕುಳೆಕುಮಟಗಿ, ಶಿವಾನಂದಯ್ಯ ಹಿರೇಮಠ, ಜಕರಾಯ ಪೂಜಾರಿ, ಗೊರಕನಾಥ ಗೇರಡೆ, ಗಿರೀಜಾ ಮೈತ್ರಿ, ಭಾಗೀರಥಿ ಕುಂಬಾರ, ಬಿಬಿಜಾನ್ ಬಿರಾದಾರ, ರೇವಮ್ಮ ಬಿರಾದಾರ, ಜಾನಾಬಾಯಿ ಬಿರಾದಾರ, ರಮೇಶ ನ್ಯಾಮಗೌಡ, ನಂದೇಪ್ಪ ಗಾಣಿಗೇರ, ಮಳೆಪ್ಪ ಮಲಕಗೊಂಡ, ತಮ್ಮಣ್ಣ ಜಮಖಂಡಿ, ಈರಯ್ಯ ಬಾಡಗಿಮಠ, ಗಣಪತಿ ಕಾರಜೋಳ, ಮಲ್ಲನಗೌಡ ಬಿರಾದಾರ, ಈರಪ್ಪ ಗಸ್ತಿ, ಸಂಗಮೇಶ ಬಿರಾದಾರ, ದುಂಡಪ್ಪ ಹಂಗರಗಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Share this