ಸಪ್ತಸಾಗರ ವಾರ್ತೆ, ವಿಜಯಪುರ, ಜ. 5:
ಪ್ರತಿಯೊಬ್ಬರ ಬದುಕಿನ ಏಳಿಗೆಯಲ್ಲಿ ಅಪ್ಪನ ಶ್ರಮ ಬಹುದೊಡ್ಡದು. ಕುಟುಂಬದ ಒಳಿತಿಗಾಗಿ ಜೀವನವನ್ನು ಸವಿಸಿದ ಅಪ್ಪನ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ. ಅಪ್ಪ-ಅಮ್ಮ ಕಣ್ಣು ಮುಂದೆ ಕಾಣುವ ಜೀವಂತ ದೇವರು ಅಪ್ಪ ಕುಟುಂಬದ ಆಧಾರ ಸ್ತಂಭ ಎಂದು ಬೆಂಗಳೂರಿನ ಖ್ಯಾತ ಲೇಖಕ, ಸಾಹಿತಿ ಡಾ, ರಾಜಶೇಖರ ಮಠಪತಿ (ರಾಗಂ) ಹೇಳಿದರು.
ಇಂದು ಅಪ್ಪ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ನಗರದ ಚೇತನಾ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಪ್ಪ ಉತ್ಸವ ಹಾಗೂ ಅಪ್ಪನೇ ದೇವರು ಎಂಬ ಕೃತಿಯ ಲೋಕಾರ್ಪಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮಗಾಗಿ ಕಂಡ ಅಪ್ಪನ ಕನಸನ್ನು ಪ್ರತಿಯೊಬ್ಬ ಮಕ್ಕಳು ಈಡೇರಿಸಬೇಕು. ಅಪ್ಪನ ಸಂತಸದ ಬದುಕು ಮಕ್ಕಳ ಸಾಧನೆಯಲ್ಲಿ ಅಡಗಿದೆ. ಬದುಕಿನ ಏಳು- ಬೀಳುಗಳ ಮಧ್ಯ ಎದ್ದು ಬದುಕನ್ನು ಸವೆದ ಅಪ್ಪನ ಬದುಕು ಸಾರ್ಥಕವಾಗಬೇಕಾದರೆ ಮಕ್ಕಳು ಒಳ್ಳೆಯ ಆಚಾರ, ವಿಚಾರ, ಸಂಸ್ಕಾರವಂತರಾಗಿ ಅಮೋಘ ಸಾಧನೆಯೆನ್ನ ಮಾಡಿ ಅಪ್ಪನ ಆಸೆಯನ್ನು ಈಡೇರಿಸಬೇಕು ಎಂದು ಹೇಳಿದರು.
‘ಅಪ್ಪನೇ ದೇವರು’ ಎಂಬ ಕೃತಿಯ ಕುರಿತು ಮಾತನಾಡಿದ ಸಾಹಿತಿ ಅಶೋಕ ಹಂಚಲಿ ಅಪ್ಪನಿಗೆ ಅಪ್ಪನೇ ಸರಿಸಾಟಿ. ಅಪ್ಪನ ಶ್ರಮ, ತ್ಯಾಗದ ಗುಣ ವರ್ಣಿಸಲು ಪದಗಳೇ ಸಾಲದು. ಅವ್ವ ಪ್ರೀತಿ ತೋರಿದರೆ ಅಪ್ಪ ನೀತಿ ಕಲಿಸಿದ ಸಾಹುಕಾರ. ಅಪ್ಪ-ಅವ್ವನನ್ನು ಗೌರವಿಸುವ ಸಂಸ್ಕೃತಿ ಬಹು ದೊಡ್ಡದು ಎಂದು ಹೇಳಿದರು.
ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಮನಗೂಳಿಯ ಸೋಮನಗೌಡ (ಅಪ್ಪು ಗೌಡ) ಪಾಟೀಲ ಮಾತನಾಡಿ ಅಪ್ಪ-ಅವ್ವನನ್ನು ವೃದ್ಧಾಶ್ರಮಕ್ಕೆ ಕಳಿಸುವ ಪದ್ಧತಿ ಕಡಿಮೆಯಾಗಬೇಕು. ಭಾರತ ದೇಶದ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾದದ್ದು. ಸಂಸ್ಕಾರ ಬದ್ಧವಾದ ಜೀವನವನ್ನು ನಡೆಸಬೇಕು. ಮಕ್ಕಳು ಅಪ್ಪ-ಅವ್ವನ ಸೇವೆ ಮಾಡಿ ಸಾರ್ಥಕ ಜೀವನವನ್ನು ಹೊಂದಬೇಕು. ಅಪ್ಪನ ವ್ಯಕ್ತಿತ್ವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷ ಗದುಗಿನ ಸಾಹಿತಿ ಡಾ, ಪಂಚಯ್ಯ ರಾಚಯ್ಯ ಹಿರೇಮಠ ಅಪ್ಪು ಉತ್ಸವ ರಾಜ್ಯದಲ್ಲಿಯೇ ಮಾದರಿಯಾದ ಕಾರ್ಯಕ್ರಮ ಈ ಉತ್ಸವ ಅಪ್ಪ-ಅವ್ವನನ್ನು ಗೌರವಿಸುವ ಸಂಸ್ಕಾರವನ್ನು ಜತೆಗೆ ಮೌಲ್ಯವನ್ನು ಬಿತ್ತರಿಸಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಪ. ಗು. ಸಿದ್ದಾಪುರ ಮಾತನಾಡಿ, ಮಕ್ಕಳಿಗೆ ಬದುಕಿನ ಮಾರ್ಗ ತೋರಿಸಿಕೊಟ್ಟ ಶ್ರೇಷ್ಠ ಗುರು ಅಪ್ಪ ಎಂದು ಹೇಳಿದರು.
ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸುಜ್ಞಾನಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ರಾಜಶ್ರೀ ಜುಗತಿ ಮಾತನಾಡಿ ಅಪ್ಪನ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ. ಮಕ್ಕಳೆಂದರೆ ಅಪ್ಪನ ಪಾಲಿಗೆ ಪಂಚಪ್ರಾಣ. ಮಕ್ಕಳಿಗೋಸ್ಕರ ಶ್ರಮಿಸುವ ಈ ಜಗತ್ತಿನ ಶ್ರೇಷ್ಠ ಜೀವಿ ಅಪ್ಪ ಎಂದು ಹೇಳಿದರು.
ನ್ಯಾಯವಾದಿಗಳಾದ ಶಾರದಾ ಕವಲೂರ, ಮಲ್ಲಿಕಾರ್ಜುನ ಭ್ರಂಗಿಮಠ ಮಾತನಾಡಿದರು.
ಶೈಲಜಾ ಬಸನಗೌಡ ಪಾಟೀಲ (ಯತ್ನಾಳ), ವೇದಿಕೆ ಗೌರವ ಅಧ್ಯಕ್ಷ ಸಾಹಿತಿ ಪ್ರೊ. ಎ. ಎಚ್. ಕೊಳಮಲಿ, ಕಾರ್ಯದರ್ಶಿ ನಿಂಗನಗೌಡ ಪಾಟೀಲ ಉಪಸ್ಥಿತರಿದ್ದರು.
ಡಾ ಸುಭಾಷ್ ಕಣ್ಣೂರ, ಗೀತಾ ವೈದ್ಯ ನಿರೂಪಿಸಿದರು.
ಅಪ್ಪನ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ:ಮಠಪತಿ


