ಸದಾಶಿವ ಗಜಾನನ ಯುವಕ ಮಂಡಳಿಯ ಕಾರ್ಯ ಇತರರಿಗೆ ಮಾದರಿ: ಶಂಭುಲಿಂಗಯ್ಯ ಶಾಸ್ತ್ರಿಗಳು
ಸಪ್ತಸಾಗರ ವಾರ್ತೆ,ಬಿಜ್ಜರಗಿ, ಸೆ. 15: ಗಣೇಶೋತ್ಸವದ ಅಂಗವಾಗಿ ಶ್ರೀ ಸದಾಶಿವ ಗಜಾನನ ಯುವಕ ಮಂಡಳಿ ವತಿಯಿಂದ ಇಲ್ಲಿನ ಮಾಣಿಕೇಶ್ವರಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿರುವ ಐದು ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ವೇದಮೂರ್ತಿ ಶ್ರೀ ಶಂಭುಲಿಂಗಯ್ಯ ಶಾಸ್ತ್ರಿಗಳು, ಹಿರೇಮಠ ರಟಗಲ್ಲ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಮಾತನಾಡಿದ ಅವರು, ಹಣ, ಆಸ್ತಿ ಸೇರಿದಂತೆ ಲೌಕಿಕ ಸಂಪತ್ತು ಕ್ಷಣಿಕವಾಗಿದ್ದು, ಮನುಷ್ಯನ ಜೀವನದಲ್ಲಿ ಶಾಶ್ವತವಾಗಿ ಉಳಿಯುವುದು ಭಕ್ತಿ ಮತ್ತು ಜ್ಞಾನ ಮಾತ್ರ. ಗಣೇಶೋತ್ಸವದ ಸಂದರ್ಭದಲ್ಲಿ ಐದು ದಿನಗಳ ಜ್ಞಾನಯಜ್ಞ ಆಯೋಜಿಸಿರುವ ಸದಾಶಿವ ಗಜಾನನ ಯುವಕ ಮಂಡಳಿಯ ಕಾರ್ಯ ಶ್ಲಾಘನೀಯ. ಬಿಜ್ಜರಗಿಯಂತಹ ಪುಣ್ಯಭೂಮಿಯಲ್ಲಿ ಯುವಕರು ಒಗ್ಗೂಡಿ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಇತರ ಯುವಕ ಮಂಡಳಿಗಳಿಗೆ ಮಾದರಿಯಾಗಿದೆ ಎಂದರು.
ಗಣೇಶೋತ್ಸವ ಕೇವಲ ಆಚರಣೆಗೆ ಸೀಮಿತವಾಗದೆ, ಯುವಕರು ಹಾಗೂ ಮಕ್ಕಳಲ್ಲಿ ಭಕ್ತಿ, ಸಂಸ್ಕಾರ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೆಳೆಸುವ ವೇದಿಕೆಯಾಗಬೇಕು. ಈ ಐದು ದಿನಗಳ ಪ್ರವಚನ ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರು, ಪುರುಷರು, ಹಿರಿಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಧ್ಯಾತ್ಮಿಕ ಜ್ಞಾನದ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.
ಮಾನವ ಜೀವನದಲ್ಲಿ ಭಕ್ತಿ, ಸಂಸ್ಕಾರ ಮತ್ತು ಆಧ್ಯಾತ್ಮದ ಮಹತ್ವವನ್ನು ಸರಳ ಹಾಗೂ ಹೃದಯಸ್ಪರ್ಶಿಯಾಗಿ ವಿವರಿಸಿದ ಅವರ ಪ್ರವಚನವನ್ನು ನೂರಾರು ಭಕ್ತರು ಭಕ್ತಿಭಾವದಿಂದ ಆಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಹಿರಿಯ ಆರ್.ಎಂ. ಮಸಳಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಷಗೌಡ ಪಾಟೀಲ ಹಾಗೂ ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ರಾಜಕುಮಾರ ಮಸಳಿ ಮಾತನಾಡಿ, ಸದಾಶಿವ ಯುವಕ ಮಂಡಳಿ ಹಮ್ಮಿಕೊಂಡಿರುವ ಆಧ್ಯಾತ್ಮಿಕ ಕಾರ್ಯಕ್ರಮ ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ. ಇಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಮುಂದಿನ ದಿನಗಳಲ್ಲಿಯೂ ಮಂಡಳಿಯ ಇಂತಹ ಕಾರ್ಯಗಳಿಗೆ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವೇದಮೂರ್ತಿ ಶರಣಯ್ಯ ಹಿರೇಮಠ ಗುರುಗಳು, ಎಂ.ಜಿ. ಗುಣಕಿ, ಸಂತೋಷ ಮಸಳಿ, ಮಲ್ಲಿಕಾರ್ಜುನ ಮಸಳಿ, ಪ್ರೊ. ಎ.ಆರ್. ಮಸಳಿ, ಮಂಜುಗೌಡ ಬಿರಾದಾರ, ರಾಜೀವ ಮಸಳಿ, ವಿ.ಆರ್. ಅಕ್ಕಿ ಸೇರಿದಂತೆ ಸದಾಶಿವ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಿದ್ದಯ್ಯ ಪಡದಳ್ಳಿ ಮತ್ತು ಮಹಾಂತೇಶ ಮ. ಸುತಾರ ಸಂಗೀತ ಸೇವೆ ಸಲ್ಲಿಸಿದರು. ಪ್ರೊ. ಎ.ಆರ್. ಮಸಳಿ ಸ್ವಾಗತಿಸಿದರು. ಕಲ್ಮೇಶ ಕನಮಡಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಕಲ್ಲಪ್ಪ ನಂದರಗಿ ನಿರೂಪಿಸಿದರು. ಪೂಜಾ ನಾಗಠಾಣ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು.


