ಅಂತಿಮ ಹಂತ ತಲುಪಿದ ವಿಮಾನ ನಿಲ್ದಾಣ ಕಾಮಗಾರಿ
ಸಪ್ತಸಾಗರ ವಾರ್ತೆ,ವಿಜಯಪುರ, ಆ.21: ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣದಿಂದ 2027ರ ಜನವರಿ ಅಂತ್ಯದೊಳಗೆ ವಿಮಾನ ಹಾರಾಟ ಆರಂಭಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್ಐಐಡಿಸಿ) ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.
ಶುಕ್ರವಾರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ಬಳಿಕ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪರಿಸರ ಇಲಾಖೆಯ ಅನುಮತಿ ವಿಳಂಬ ಹಾಗೂ ಸುಪ್ರೀಂ ಕೋರ್ಟ್ನ ತಡೆಯಾಜ್ಞೆಯಿಂದ ವಿಮಾನ ನಿಲ್ದಾಣ ಕಾಮಗಾರಿ ಮತ್ತು ಕಾರ್ಯಾರಂಭಕ್ಕೆ ವಿಳಂಬವಾಗಿತ್ತು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಡಾ.ಎಂ.ಬಿ. ಪಾಟೀಲರ ನಿರಂತರ ಪ್ರಯತ್ನದಿಂದ ಸುಮಾರು ಮೂರು ವಾರಗಳ ಹಿಂದೆ ತಡೆಯಾಜ್ಞೆ ತೆರವಾಗಿದೆ ಎಂದು ತಿಳಿಸಿದರು.
ಕೇಂದ್ರ ಪರಿಸರ ಇಲಾಖೆಯ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದ್ದರೂ ಶೀಘ್ರದಲ್ಲೇ ಅನುಮತಿ ದೊರೆಯುವ ವಿಶ್ವಾಸವಿದೆ ಎಂದರು.
ರಾತ್ರಿ ವಿಮಾನ ಹಾರಾಟಕ್ಕೂ ಸಿದ್ಧತೆ
ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನಗಳ ಹಾರಾಟಕ್ಕೆ ಅಗತ್ಯವಿರುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೊಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನೈಟ್ ಲ್ಯಾಂಡಿಂಗ್ಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ತಾಂತ್ರಿಕ ವಿಭಾಗ ಹಾಗೂ ರಾಷ್ಟ್ರೀಯ ವಿಮಾನಯಾನ ಇಲಾಖೆಯಿಂದ ಅಂತಿಮ ಅನುಮೋದನೆ ದೊರೆತ ಬಳಿಕ ವಿಮಾನ ಹಾರಾಟ ಆರಂಭವಾಗಲಿದೆ ಎಂದು ನಂಜಯ್ಯನಮಠ ಹೇಳಿದರು.
ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಪರಿಶ್ರಮದಿಂದ ಹೊಸ ವರ್ಷದ ಆರಂಭದಲ್ಲೇ ವಿಜಯಪುರದಿಂದ ವಿಮಾನಯಾನ ಸೇವೆ ಆರಂಭಿಸುವ ಗುರಿ ಹೊಂದಲಾಗಿದೆ ಎಂದರು.
₹618.75 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ
ಏರ್ಬಸ್-320 ಮಾದರಿಯ ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ವಿಜಯಪುರ ವಿಮಾನ ನಿಲ್ದಾಣವನ್ನು ₹618.75 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಕರ್ನಾಟಕ ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ಕಾಮಗಾರಿಗೆ ಅನುದಾನ ಒದಗಿಸಲಾಗುತ್ತಿದೆ. ಕಾಮಗಾರಿಯ ಮೇಲ್ವಿಚಾರಣೆಗೆ ಬೆಂಗಳೂರಿನ ಕೆಎಸ್ಐಐಡಿಸಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ.
ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಅನುಷ್ಠಾನಗೊಳ್ಳುತ್ತಿದ್ದು, ಬೆಂಗಳೂರಿನ ಐಡೆಕ್ ಸಂಸ್ಥೆಯನ್ನು ಕಾಮಗಾರಿ ನಿರ್ವಹಣೆ ಹಾಗೂ ಸಲಹೆಗಾರ ಸಂಸ್ಥೆಯಾಗಿ (ಪಿಎಂಸಿ) ನೇಮಿಸಲಾಗಿದೆ. ವಿಮಾನ ನಿಲ್ದಾಣದ ವಿನ್ಯಾಸವನ್ನು ವಿಮಾನ ನಿಲ್ದಾಣ ವಿನ್ಯಾಸದಲ್ಲಿ ಪರಿಣತಿ ಹೊಂದಿರುವ ಗುರುಗ್ರಾಮದ ಮೆಸ್ಸರ್ಸ್ ರೈಟ್ಸ್ ಸಂಸ್ಥೆ ರೂಪಿಸಿದೆ ಎಂದು ವಿವರಿಸಿದರು.
ಎರಡು ಪ್ಯಾಕೇಜ್ಗಳಲ್ಲಿ ಕಾಮಗಾರಿ
ಪ್ಯಾಕೇಜ್-1ರಲ್ಲಿ ರನ್ವೇ, ಟ್ಯಾಕ್ಸಿವೇ, ಏಪ್ರಾನ್, ಐಸೋಲೇಶನ್ ಬೇ, ಸಂಪರ್ಕ ರಸ್ತೆ, ಒಳರಸ್ತೆಗಳು, ಪೆರಿಫೆರಲ್ ರಸ್ತೆಗಳು ಸೇರಿದಂತೆ ವಿವಿಧ ಪೇವ್ಮೆಂಟ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಪ್ಯಾಕೇಜ್-2ರಲ್ಲಿ ಪ್ರಯಾಣಿಕರ ಟರ್ಮಿನಲ್ ಕಟ್ಟಡ, ಎಟಿಸಿ ಟವರ್, ಸಿಎಫ್ಆರ್, ಇಎಸ್ಎಸ್, ಆರ್ಮರಿ ಮತ್ತು ಡಾಗ್ ಕೆನೆಲ್, ಕ್ಯಾಂಟೀನ್, 10 ವಾಚ್ ಟವರ್ಗಳು, ಫೈರ್ ಪಿಟ್, ಕೂಲಿಂಗ್ ಪಿಟ್, ಕೆಳಮಟ್ಟ ಹಾಗೂ ಮೇಲ್ಮಟ್ಟದ ನೀರು ಸಂಗ್ರಹಣಾ ವ್ಯವಸ್ಥೆ, ಎಸ್ಟಿಪಿ, ಪಂಪ್ ಹೌಸ್, ಕಂಪೌಂಡ್ ಗೋಡೆ, ಸೋಲಾರ್ ಪ್ಯಾನೆಲ್, ಏವಿಯೋನಿಕ್ಸ್ ಹಾಗೂ ಭದ್ರತಾ ಉಪಕರಣಗಳ ಕಾಮಗಾರಿ ಕೈಗೊಳ್ಳಲಾಗಿದೆ.
ವಿಮಾನ ನಿಲ್ದಾಣಕ್ಕೆ 24×7 ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕಾರ್ಯಾಚರಣೆಗೆ ಅಗತ್ಯವಿರುವ ಎರಡು ಅಗ್ನಿಶಾಮಕ ವಾಹನಗಳು, ಬಾಂಬ್ ಡಿಟೆಕ್ಷನ್ ಮತ್ತು ಡಿಸ್ಪೋಸಲ್ ಸ್ಕ್ವಾಡ್ (ಬಿಡಿಡಿಎಸ್) ಉಪಕರಣಗಳು ಹಾಗೂ ಡಿವಿಒಆರ್ ಉಪಕರಣಗಳನ್ನು ಖರೀದಿಸಲಾಗಿದೆ ಎಂದರು.
ನೈಟ್ ಲ್ಯಾಂಡಿಂಗ್, ಚತುಷ್ಪಥ ರಸ್ತೆಗೂ ₹117 ಕೋಟಿ
ರಾತ್ರಿ ವಿಮಾನ ಕಾರ್ಯಾಚರಣೆಗೆ ಅಗತ್ಯವಿರುವ ಭೂಸ್ವಾಧೀನ ಸೇರಿದಂತೆ ಕಾಮಗಾರಿಗೆ ₹65 ಕೋಟಿ ಹಾಗೂ ರಾಷ್ಟ್ರೀಯ ಹೆದ್ದಾರಿ-50ರ ವಿಜಯಪುರ-ಕಲಬುರಗಿ ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಸೇರಿದಂತೆ ₹52 ಕೋಟಿ ಅನುದಾನಕ್ಕೆ ರಾಜ್ಯ ಸರ್ಕಾರ 2025ರ ಅಕ್ಟೋಬರ್ 3ರಂದು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಈ ಎರಡೂ ಕಾಮಗಾರಿಗಳಿಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೆಐಎಡಿಬಿ ಕೈಗೊಂಡಿದೆ. ಈಗಾಗಲೇ ಪ್ರಾಥಮಿಕ ಅಧಿಸೂಚನೆಗೆ ಅನುಮೋದನೆ ದೊರೆತಿದ್ದು, ಭೂಮಾಲೀಕರೊಂದಿಗೆ ಆಕ್ಷೇಪಣೆ ಸಭೆ ನಡೆಸಲಾಗಿದೆ. ಪ್ರಸ್ತುತ ಜಂಟಿ ಮಾಪನ ಕಾರ್ಯ (ಜೆಎಂಸಿ) ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಟೆಂಡರ್ ಆಹ್ವಾನಿಸಲಾಗುವುದು ಎಂದು ನಂಜಯ್ಯನಮಠ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎಸ್. ಪೊಲೀಸ್ ಪಾಟೀಲ, ಸಹಾಯಕ ಎಂಜಿನಿಯರ್ ಆರ್.ಎನ್. ಮಸಳಿ, ವಿಮಾನ ನಿಲ್ದಾಣದ ನಿರ್ದೇಶಕ ಪಿ.ಸಿ. ಪೊನ್ನಪ್ಪ, ಚಂದ್ರಶೇಖರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


