ಸಪ್ತಸಾಗರ ವಾರ್ತೆ,ಬಾಗಲಕೋಟೆ, ಜು.2:
ಭೂಗತ ಅನಿಲ ಪೈಪ್‌ಲೈನ್‌ಗಳ ಸುರಕ್ಷತೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಥಿಂಕ್ ಗ್ಯಾಸ್ ಸಂಸ್ಥೆ ಬಾಗಲಕೋಟೆ ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವಿಶೇಷ ಸುರಕ್ಷತಾ ಜಾಗೃತಿ ಅಭಿಯಾನ ಆರಂಭಿಸಿದೆ.
ಅನಿಲ ಪೈಪ್‌ಲೈನ್‌ಗಳ ಸಮೀಪ ಯಾವುದೇ ಉತ್ಖನನ ಕಾರ್ಯ ಕೈಗೊಳ್ಳುವ ಮುನ್ನ ಸಂಬಂಧಿತ ಇಲಾಖೆ ಹಾಗೂ ಥಿಂಕ್ ಗ್ಯಾಸ್ ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸುವಂತೆ ಸರ್ಕಾರಿ ಇಲಾಖೆ, ಗುತ್ತಿಗೆದಾರರು, ಯುಟಿಲಿಟಿ ಸಂಸ್ಥೆಗಳು ಹಾಗೂ ಖಾಸಗಿ ಉತ್ಖನನ ಏಜೆನ್ಸಿಗಳಿಗೆ ಮನವಿ ಮಾಡಲಾಗಿದೆ. ಅನಧಿಕೃತ ಉತ್ಖನನದಿಂದ ಭೂಗತ ಅನಿಲ ಪೈಪ್‌ಲೈನ್‌ಗೆ ಹಾನಿಯಾಗದಂತೆ ತಡೆಯುವುದು ಹಾಗೂ ಸಾರ್ವಜನಿಕ ಸುರಕ್ಷತೆ ಖಚಿತಪಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಬಾಗಲಕೋಟೆ ನಗರದ ವಿದ್ಯಾಗಿರಿ, ಜ್ಯೋತಿ ಕಾಲೋನಿ, ರೂಪ್‌ಲ್ಯಾಂಡ್, ತೆಗ್ಗಿ ಲೇಔಟ್, ನವನಗರದ ವಿವಿಧ ಸೆಕ್ಟರ್‌ಗಳು, ಹಳೆಯ ಬಾಗಲಕೋಟೆಯ ಲಕ್ಷ್ಮೀನಗರ, ಶಾಂತಿನಗರ, ದೀಪಂ ಕಾಲೋನಿ, ಮದೀನಾ ಕಾಲೋನಿ, ಐಬಿ ಕಾಲೋನಿ, ವಿವೇಕಾನಂದ ಕಾಲೋನಿ, ಸಕ್ರಿ ಲೇಔಟ್ ಹಾಗೂ ಗುಜ್ಜರ್ ಕಾಲೋನಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಅಭಿಯಾನ ನಡೆಯಲಿದೆ.
ಸುರಕ್ಷತಾ ಕ್ರಮವಾಗಿ ಪೈಪ್‌ಲೈನ್ ಇರುವ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳು, ಮಾರ್ಗ ಗುರುತುಗಳು ಹಾಗೂ ವಾರ್ನಿಂಗ್ ಮ್ಯಾಟ್‌ಗಳನ್ನು ಅಳವಡಿಸಲಾಗುತ್ತಿದೆ. ಜೊತೆಗೆ ಪೈಪ್‌ಲೈನ್ ಗಸ್ತು, ಸಾರ್ವಜನಿಕ ಜಾಗೃತಿ ಕಾರ್ಯಕ್ರಮ, ಪಾಲುದಾರರ ಸಭೆಗಳು ಹಾಗೂ ಉಪಯುಕ್ತತಾ ಸಮನ್ವಯ ಸಭೆಗಳನ್ನೂ ಆಯೋಜಿಸಲಾಗುತ್ತಿದೆ.
ಉತ್ಖನನ ಕಾರ್ಯ ಆರಂಭಿಸುವ ಮುನ್ನ ಭಾರತ ಸರ್ಕಾರದ “ಡಯಲ್ ಬಿಫೋರ್ ಯು ಡಿಗ್” ವ್ಯವಸ್ಥೆಯನ್ನು ಬಳಸಿಕೊಳ್ಳುವಂತೆ ಹಾಗೂ ಸಂಬಂಧಿತ ಪುರಸಭೆ ಅಥವಾ ನಗರ ಅನಿಲ ವಿತರಣಾ ಸಂಸ್ಥೆಗೆ ಮುಂಚಿತ ಮಾಹಿತಿ ನೀಡುವಂತೆ ಥಿಂಕ್ ಗ್ಯಾಸ್ ಮನವಿ ಮಾಡಿದೆ.
ಪೂರ್ವಾನುಮತಿ ಇಲ್ಲದೆ ಭೂಗತ ಅನಿಲ ಪೈಪ್‌ಲೈನ್ ಸಮೀಪ ಉತ್ಖನನ ನಡೆಸಿದರೆ PNGRB ಕಾಯ್ದೆ-2006 ಹಾಗೂ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 285 ಮತ್ತು 336ರ ಅಡಿಯಲ್ಲಿ ಜೈಲು ಶಿಕ್ಷೆ ಹಾಗೂ ದಂಡ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಎಚ್ಚರಿಸಲಾಗಿದೆ.
ಅನಿಲ ಸೋರಿಕೆ ಶಂಕೆ ಕಂಡುಬಂದರೆ ತಕ್ಷಣ ವಿದ್ಯುತ್ ಹಾಗೂ ಯಾಂತ್ರಿಕ ಉಪಕರಣಗಳನ್ನು ಸ್ಥಗಿತಗೊಳಿಸಿ, ಬೆಂಕಿ ಉಂಟುಮಾಡುವ ಚಟುವಟಿಕೆಗಳಿಂದ ದೂರವಿದ್ದು, ಸ್ಥಳದಿಂದ ಜನರನ್ನು ಸುರಕ್ಷಿತವಾಗಿ ದೂರ ಸರಿಸಿ ಥಿಂಕ್ ಗ್ಯಾಸ್ ತುರ್ತು ತಂಡಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ತುರ್ತು ನೆರವು ಅಥವಾ ಉತ್ಖನನ ಸಮನ್ವಯಕ್ಕಾಗಿ ಥಿಂಕ್ ಗ್ಯಾಸ್ 24×7 ತುರ್ತು ನಿಯಂತ್ರಣ ಕೇಂದ್ರದ ಟೋಲ್-ಫ್ರೀ ಸಂಖ್ಯೆ 1800 2022 999 ಅನ್ನು ಸಂಪರ್ಕಿಸಬಹುದು.
Editor
Rudrappa B Asangi
Editor
Managing Editor
Chetan Asangi
Managing Editor


