ಆರೋಗ್ಯಯುತ ಜೀವನಕ್ಕೆ ದೈಹಿಕ-ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳುವುದು ಅತ್ಯವಶ್ಯಕ-ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.25:
ಒತ್ತಡದ ಜೀವನದ ಮಧ್ಯೆ ಆರೋಗ್ಯಯುತ ಬದುಕಿಗೆ ದೈಹಿಕ ಹಾಗೂ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಮ್ಮ ದೈನಂದಿನದ ಜೀವನದಲ್ಲಿ ಅಳವಡಿಸಿಕೊಂಡು ಮಾನಸಿಕ ಹಾಗೂ ದೈಹಿಕ ಸದೃಢತೆ ಹೊಂದಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಕರೆ ನೀಡಿದರು.
ನಗರದ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಗುರುವಾರ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನಸಿಕ ಸ್ಥಿರತೆ ಹೊಂದಲು ಇಂತಹ ಕ್ರೀಡಾಕೂಟಗಳು ಸಹಾಯಕವಾಗಿವೆ. ಕ್ರೀಡೆಗಳು ಮಾನಸಿಕ ಸ್ಥಿರತೆ ಹೊಂದಲು ಪೂರಕವಾಗಿ ಪ್ರೇರಣೆಯಾಗಿವೆ. ಬಿಡುವಿಲ್ಲದ ಕಾರ್ಯದೊಂದಿಗೆ ಒತ್ತಡದ ನಿವಾರಣೆಗಾಗಿ ಹೆಚ್ಚೆಚ್ಚು ಕ್ರೀಡೆ, ಆಟೋಟ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಮಾನಸಿಕ ಸದೃಢತೆಯನ್ನು ಕಾಪಾಡಿಕೊಳ್ಳಬೇಕು. ದೇಹಾರೋಗ್ಯ ಮತ್ತು ಮಾನಸಿಕ ಆರೋಗ್ಯ ಹೊಂದಿ ಸ್ಪೂರ್ತಿದಾಯಕ ಜೀವನ ನಡೆಸಬೇಕು ಎಂದು ಕಿವಿ ಮಾತು ಹೇಳಿದರು.
ಸಾರಿಗೆ ಸಿಬ್ಬಂದಿಗಳು ದಿನನಿತ್ಯ ಸಾರ್ವಜನಿಕರೊಂದಿಗೆ ಸಂಪರ್ಕವಿರುವ ಒತ್ತಡದ ವೃತ್ತಿ ಜೀವನ. ಇಂತಹ ಸಂದರ್ಭದಲ್ಲಿ ತಾಳ್ಮೆ ಬಹುಮುಖ್ಯವಾಗಿದೆ. ಮಾನಸಿಕ ಒತ್ತಡಕ್ಕೊಳಗಾಗದೇ ತಾಳ್ಮೆಯಿಂದ ಸಂಯಮದಿಂದ ಸಾರ್ವಜನಿಕರೊಂದಿಗೆ ಇರಬೇಕು. ಈ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕ ಸದೃಢತೆಯೊಂದಿಗೆ ಮಾನಸಿಕವಾಗಿ ಸಮಾಧಾನ ಚಿತ್ತತೆ ಹಾಗೂ ಸಂಯಮ ಹೊಂದಿ, ಕಾರ್ಯನಿರ್ವಹಿಸಬೇಕು. ಒತ್ತಡಕ್ಕೆ ಒಳಗಾಗದೇ ಸಂತೃಪ್ತಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಕ್ರೀಡಾಕೂಟಗಳ ಆಯೋಜನೆಯಿಂದ ದೈಹಿಕ ಮಾನಸಿಕ ಸ್ಥಿರತೆ ಹೊಂದುವುದಲ್ಲದೇ, ವಿವಿಧ ಭಾಗಗಳಿಂದ ಭಾಗವಹಿಸಿದ ಕ್ರೀಡಾಪಟುಗಳೊಂದಿಗೆ ಬೆರೆತು, ಸಮಭಾವ, ಸಮಚಿತ್ರ, ಮುಖಂಡತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ. ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಸಮಚಿತ್ತ-ಸಮಭಾವದಿಂದ ಸಮಾನವಾಗಿ ತೆಗೆದುಕೊಂಡು ಸ್ವ ಸಂತೋಷ ಪಡೆಯಬೇಕು. ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ ಉತ್ತಮ ಸಾಧನೆಗೈಯ್ಯಬೇಕು ಎಂದು ಅವರು ಹೇಳಿದರು.
ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ಮಾತನಾಡಿ, ನಿಗಮದ ವತಿಯಿಂದ ಪ್ರತಿ ವರ್ಷ ವಿಭಾಗೀಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ. ಒತ್ತಡದ ವೃತ್ತಿ ಬದುಕಿನಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಒತ್ತಡ ನಿವಾರಣೆಗೆ ಕ್ರೀಡಾಕೂಟಗಳು ಸಹಕಾರಿಯಾಗುತ್ತದೆ. ಈ ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಸಕ್ರಿಯವಾಗಿ ಭಾಗವಹಿಸಿ ಸಾಧನೆಗೈದು ಇಲಾಖೆ ಕೀರ್ತಿ ಹೆಚ್ಚಿಸಬೇಕು ಎಂದು ಅವರು ಹೇಳಿದರು.
ಕ್ರೀಡಾಕೂಟದಲ್ಲಿ ವ್ಹಾಲಿಬಾಲ್, ಶೆಟಲ್ ಕಾಕ್ ಸಿಂಗಲ್, ಚೆಸ್, ಕೇರಂ, ಪುರುಷ ಹಾಗೂ ಮಹಿಳೆಯರಿಗೆ ಆಥ್ಲೆಟಿಕ್ಸ್, 100ಮೀ, 200 ಮೀ. ಹಾಗೂ 400 ಓಟ್, ಪಾಸ್ಟ್ ವಾಕ್, ಥ್ರೋ ಬಾಲ್, ಕ್ರೀಕೆಟ್ ಮಹಿಳೆಯರಿಗೆ ಚುಕ್ಕಿ ರಂಗೋಲಿ, ಭಾವಗೀತೆ, ಏಕ ಪಾತ್ರಾಭಿನಯ ಸೇರಿದಂತೆ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಅಶೋಕ ಘೋಣಸಗಿ, ಸಾರಿಗೆ ಅಧಿಕಾರಿಗಳಾದ ಎಂ.ಎಸ್.ಹಿರೇಮಠ, ಎಂ.ಎಚ್.ಅಗರಖೇಡ, ಕಾರ್ಮಿಕ ಮುಖಂಡ ಆರ್.ಜಿ.ಲಿಂಗದಳ್ಳಿ, ಘಟಕ ವ್ಯವಸ್ಥಾಪಕ ಎಸ್.ಎಂ.ವಾಲೀಕಾರ ಸೇರಿದಂತೆ ತರಬೇತಿದಾರರು, ದೈಹಿಕ ಶಿಕ್ಷಕರು, ಇತರರು ಉಪಸ್ಥಿತರಿದ್ದರು.

Share